
ಎಂ ಹೈದರ್
ದೇಶ ಇಂದು ಎಪ್ಪತ್ತೈದನೆ ಸ್ವಾತಂತ್ರೊತ್ಸವನ್ನು ಆಚರಿಸುತ್ತಿದೆ ಆದರೆ ಆಳುವ ಸರ್ಕಾರ ಹಂತಹಂತವಾಗಿ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತಾ ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಳ್ಳುತ್ತಿದೆ. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೆ ಬ್ರಿಟಿಷರ ಪರವಾಗಿದ್ದ ಸಂಘ ಪರಿವಾರದವರು ಅಧಿಕಾರ ಹಿಡಿದು ಏಳು ವರ್ಷಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಇಳಿಯುವಂತೆ ಮಾಡಿ ಪೆಟ್ರೋಲ್ ಡೀಸೆಲ್ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳು ಗಗನಕ್ಕೇರುವಂತೆ ಮಾಡಿ ಜನ ಸಾಮಾನ್ಯರ ಬದುಕು ಅಕ್ಷರಶಃ ಹೀನಾಯ ಸ್ಥಿತಿಗೆ ತಲುಪಿದೆ.
ದೂರದೃಷ್ಟಿ ಇಲ್ಲದ ಮೋದಿಯ ಎಡಬಿಡಂಗಿ ತೀರ್ಮಾನಗಳಿಂದಾಗಿ ಉಂಟಾದ ವೈಫಲ್ಯಗಳನ್ನು ಮರೆಮಾಚಲು ಇಂದಿನ ಸ್ಥಿತಿಗೆ ಹಿಂದಿನ ಸರ್ಕಾರಗಳು ಕಾರಣ ಎಂದು ಬಿಂಬಿಸಲು ಲಜ್ಜೆ ಬಿಟ್ಟು ಸುಳ್ಳು ಹೇಳುತ್ತಾ ಹೊಣೆಗೇಡಿಯಾಗಿ ವರ್ತಸಿ ಜನರನ್ನು ಭಾವನಾತ್ಮಕವಾಗಿ ರಾಷ್ಟ್ರವಾದ ಜಾತಿ, ಧರ್ಮ, ಸಮುದಾಯ ಗಡಿಗಳ ವಿಚಾರದಲ್ಲಿ ಸುಳ್ಳುಗಳನ್ನು ಹರಿಯಬಿಟ್ಟು ಜನರು ಅದರಲ್ಲಿ ಮಗ್ನರಾಗುವಂತೆ ಮಾಡಿ ಸರ್ಕಾರ ಜನಪರವಾಗಿ ಕೆಲಸ ಮಾಡದೆ ಕಾರ್ಪೊರೇಟ್ ಗಳ ಪರವಾಗಿ ಕಾನೂನುಗಳನ್ನು ತಿದ್ದುಪಡಿ ಮಾಡಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಜನರಿಂದ ಎಲ್ಲವನ್ನೂ ಕಿತ್ತುಕೊಂಡು ಅವರನ್ನು ಪ್ರಭುತ್ವದ ಗುಲಾಮಗಿರಿಗೆ ಕರೆದೊಯ್ಯತ್ತಿದ್ದಾರೆ ಇದನ್ನು ಅರ್ಥಮಾಡಿಕೊಳ್ಳಲಾಗದ ದುರ್ಬಲ ಮನಸ್ಥಿತಿಯ ಧರ್ಮಾಂಧ ಜನ ಅವರಿಗೆ ಬಹುಪರಾಕ್ ಹೇಳುತ್ತಾ ದೇಶವನ್ನು ವಿನಾಶಕಾರಿ ಸ್ಥಿತಿಗೆ ತಲುಪಿಸುತ್ತಿದ್ದಾರೆ.
ಬಿಜೆಪಿಯವರು ದೇಶದಲ್ಲಿ ರಾಷ್ಟ್ರವಾದದ ಪೊಳ್ಳು ಮಾತಿನಿಂದ ಕೋಮುದ್ರುವಿಕರಣದ ಮೂಲಕ ಅಧಿಕಾರ ಹಿಡಿದಿದ್ದಾರೆ. ಅವರು ಅಧಿಕಾರ ವಹಿಸಿಕೊಳ್ಳುತ್ತಲೇ ನಾವು ಮೊದಲು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು ಆದರೆ ಅವರು ಮೊದಲು ಮಾಡಿದ ಕೆಲಸ ದೇಶದ ಪ್ರಜಾಪ್ರಭುತ್ವ ನಾಲ್ಕನೇ ಅಂಗವೆಂದು ಹೇಳಲಾಗುತ್ತಿದ್ದ ಸುದ್ದಿ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಿದ್ದು, ನಂತರ ತನಿಖಾ ಸಂಸ್ಥೆಗಳನ್ನು ತಮ್ಮ ವಿರೋಧಿಗಳನ್ನು ಹಣಿಯಲು ಬಳಸಿಕೊಂಡರು ನಂತರ ಚುನಾವಣಾ ಆಯೋಗವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದರು ಇಲ್ಲಿಗೂ ಅವರು ತೃಪ್ತರಾಗದೆ ದೇಶದ ನ್ಯಾಯಾಂಗ ವ್ಯವಸ್ಥೆಗೂ ಲಕ್ಷ್ಮಣರೇಖೆಯನ್ನು ತೋರಿದರು.
ದೇಶದ ವ್ಯವಸ್ಥೆಯಲ್ಲಿನ ಆಗು ಹೋಗುಗಳ ಬಗ್ಗೆ ಜನರಿಗೆ ವಾಸ್ತವವನ್ನು ತಲುಪಿಸಲು ತಕ್ಕಮಟ್ಟಿಗೆ ಪ್ರಸ್ತುತವಾಗಿ ನೆರವಾಗುತ್ತಿದ್ದ ಮರಳುಗಾಡಿನ ಮರಿಚಿಕೆಯಂತೆ ಕಾಣುತ್ತಿದ್ದ ಸಾಮಾಜಿಕ ಜಾಲತಾಣಗಳನ್ನು ಕೂಡ ಈಗ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದ್ದಾರೆ ಇದಕ್ಕೆ ಕಳೆದವಾರ ಕೆಲ ನಿರ್ದಿಷ್ಟ ಉದ್ದೇಶದಿಂದ ಕೆಲವು ರಾಜಕೀಯ ಮುಖಂಡರ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು ಇದಕ್ಕೆ ಪುಷ್ಟಿ ನೀಡಿದೆ.
ಎಲ್ಲಕ್ಕಿಂತ ಭಯಾನಕ ವಿಚಾರವೆಂದರೆ ಇಸ್ರೇಲ್ ನ ಎನ್ಎಸ್ಒ ಕಂಪನಿಯ ಪೆಗಾಸಸ್ ಸಾಫ್ಟ್‌ವೇರ್ ಬಳಸಿ ದೇಶದ ನಾಗರಿಕರ ಮೇಲೆ ಕಣ್ಗಾವಲು ಅಸ್ತ್ರವನ್ನು ಬಳಸಿ ಇಲ್ಲಿನ ಚುನಾಯಿತ ಸರ್ಕಾರಗಳನ್ನು ಆಪರೇಷನ್ ಮೂಲಕ ಉರುಳಿಸಿ ತನ್ನದೇ ಸರ್ಕಾರವನ್ನು ರಚಿಸಿಕೊಂಡಿದೆ ಎಂಬುದು ಆಘಾತಕಾರಿ ವಿಚಾರವಾಗಿದೆ. ಪೆಗಾಸಸ್ ಮೂಲಕ ನಾಗರಿಕರ ಮೇಲೆ ಕಣ್ಗಾವಲು ಅಸ್ತ್ರವನ್ನು ಬಳಸಿದ್ದು ನಾಗರಿಕರ ವೈಯುಕ್ತಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ.
ಗುಂಪು ಹತ್ಯೆಯನ್ನು ನಡೆಸುವವರು ಹಿಂದುಗಳಲ್ಲ ಎಂದು ಮೋಹನ್ ಭಾಗವತ್ ಭಾಷಣ ಮಾಡುತ್ತಾರೆ ಆದರೆ ದನದ ಹೆಸರಿನಲ್ಲಿ ಮನುಷ್ಯರನ್ನು ಗುಂಪು ಸೇರಿ ಕೊಲ್ಲುವುದು ಈಗ ಅವರಿಗೆ ಒಂದು ಆಟವಾಗಿದೆ. ಅಲ್ಲದೇ ಇಂತಹ ಗುಂಪು ಹತ್ಯೆಯಲ್ಲಿ ಪಾಲ್ಗೊಂಡವರನ್ನು ಹೂವಿನ ಹಾರ ಹಾಕಿ ಗೌರವಿಸಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರದ ಆರೋಪಿಗಳ ಪರವಾಗಿ ನಿಲ್ಲುವ ಜನರಿದ್ದಾರೆ ಎಷ್ಟೇ ಭ್ರಷ್ಟಾಚಾರ ನಡೆಸಿ ಅನೈತಿಕ ವ್ಯವಹಾರದಲ್ಲಿ ತೊಡಗಿದ್ದರು ಸಮುದಾಯ ಅಥವ ಧರ್ಮದ ಕಾರಣದಿಂದ ಅಂತವರಿಗೆ ಜೈಕಾರ ಹಾಕುವ ಜನರಿದ್ದಾರೆ. ಇದಕ್ಕೆಲ್ಲ ಭಾಗವತ್ ನಂತವರ ಮೌನ ಸಮ್ಮತಿಯೂ ಇದೆ.
ತನ್ನ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುವ ಹಿಂದುಳಿದ ನಾಯಕರಿಗೆ ಮಂತ್ರಿಗಿರಿ ಎಂಬ ಲಗಾಮು ಹಾಕಿ ಹಿಂದುಳಿದ ವರ್ಗಗಳ ಪರವಾಗಿದ್ದೇವೆ ಮತ್ತು ಮೀಸಲಾತಿಯ ಪರವಾಗಿದ್ದೇವೆ ಎಂದು ಬಿಂಬಿಸುತ್ತಾ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ನೀತಿಗೆ ಕೊಡಲಿ ಪೆಟ್ಟು ನೀಡುತ್ತಿರುವ ಪ್ರಭುತ್ವ ಖಾಸಗೀಕರಣಗಳ ಮೂಲಕ ಜನರ ಸ್ವಾತಂತ್ರ್ಯದ ಹಕ್ಕನ್ನು ಕಸಿಯಲು ಎಲ್ಲ ತಂತ್ರಗಾರಿಕೆಯನ್ನು ಪ್ರಯೋಗಿಸುತ್ತಿದೆ.
ಮಾಧ್ಯಮಗಳು ಪ್ರಭುತ್ವವನ್ನ ಪ್ರಶ್ನೆ ಕೇಳುವ ಸಂಪ್ರದಾಯವನ್ನೇ ಮರೆತಿವೆ ದೇಶದಲ್ಲಿನ ಗಂಭೀರ ವಿಚಾರಗಳ ಬಗ್ಗೆ ಮಾದ್ಯಮಗಳು ಚರ್ಚೆ ನಡೆಸುವುದಿಲ್ಲ ಬದಲಾಗಿ ಸರ್ಕಾರದ ವಕ್ತಾರಿಕೆಯಲ್ಲಿ ವಿರೋಧ ಪಕ್ಷಗಳನ್ನೇ ಪ್ರಶ್ನೆ ಮಾಡುತ್ತಿವೆ.
ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸದೆ ಸದನವನ್ನೇ ರದ್ದುಗೊಳಿಸಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸ್ವತಃ ಪ್ರಭುತ್ವವೇ ಹೇಳುತ್ತಿದೆ. ರೈತರು ವಿಧ್ಯಾರ್ಥಿಗಳು ಯಾರೇ ಆದರೂ ಪ್ರಭುತ್ವದ ವಿರುದ್ಧ ಚಳುವಳಿ ನಡೆಸುವುದನ್ನು ಶತಾಯಗತಾಯ ಹತ್ತಿಕ್ಕಲು ತನ್ನ ಎಲ್ಲ ಶಕ್ತಿಯನ್ನು ಬಳಸುತ್ತಿದೆ ಕಳೆದ ಎಂಟು ತಿಂಗಳಿಗೂ ಹೆಚ್ಚು ಕಾಲದಿಂದ ರಾಜಧಾನಿ ದೆಹಲಿಯ ಗಡಿಗಳಲ್ಲಿ ಮೂರು ಕೃಷಿ ಕಾನೂನುಗಳನ್ನು ಕೈಬಿಡಲು ರೈತರು ನಡೆಸುತ್ತಿರುವ ಚಳವಳಿಯನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನದಿಂದ ಅನ್ನದಾತರನ್ನು ದೇಶದ್ರೋಹಿಗಳ ಪಟ್ಟ ಕಟ್ಟಲು ಹವಣಿಸುತ್ತಿದೆ ಇಂತಹ ನೂರಾರು ಕಾರಣಗಳಿಂದಾಗಿ ಭಾರತದ ನಾಗರಿಕರ ಸ್ವಾತಂತ್ರ್ಯದ ಮೇಲೆ ಕರಿನೆರಳು ಕವಿದಿದೆ.




