Breaking NewsLatestಇತರ ಕ್ರೀಡೆಕೊಡಗುಕ್ರೀಡೆ

ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಅಂಕಿತಾ ಸುರೇಶ್​ಗೆ ಅದ್ದೂರಿ ಸ್ವಾಗತ

ಟೋಕಿಯೋ: ಒಲಿಂಪಿಕ್ಸ್​ನಲ್ಲಿ ಹಾಕಿಯ ತವರೂರು ಕೊಡಗು ಜಿಲ್ಲೆಯಿಂದ ಯಾವುದೇ ಆಟಗಾರ ಭಾಗಿಯಾಗಿರಲಿಲ್ಲ. ಆದರೆ ಕೊಡಗಿನ ಮಹಿಳಾ ಹಾಕಿ ಕಲಿಯೊಬ್ಬರ ಹೆಸರು ಮುನ್ನೆಲೆಗೆ ಬಂದು ರಾಜ್ಯ ಹಾಗೂ ರಾಷ್ಟ್ರದ ಚಿತ್ತ ಕೊಡಗಿನತ್ತ ಹರಿಯುವಂತೆ ಮಾಡಿತ್ತು.

ಇದಕ್ಕೆ ಕಾರಣವಿಲ್ಲದಿಲ್ಲ. ಕೊಡಗಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಹಾಕಿ ಹುರಿಯಾಳು ಅಂಕಿತಾ ಸುರೇಶ್ ಅವರು ಭಾರತೀಯ ಸೀನಿಯರ್ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ನಿಯುಕ್ತಿಗೊಂಡ ವಿಷಯ ಜಗಜ್ಜಾಹೀರಾಗುತ್ತಿದಂತೆಯೇ ಕ್ರೀಡಾ ಪ್ರೇಮಿಗಳಲ್ಲಿ ಸಂಚಲನವನ್ನುಂಟು ಮಾಡಿ “ಗೆದ್ದುಬನ್ನಿ” ಎಂದು ಮನಸಾರೆ ಹಾರೈಸಿದ್ದರು.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತೀಯ ವನಿತೆಯರ ಹಾಕಿ ತಂಡ ವಿದೇಶಗಳ ಪ್ರಬಲ ತಂಡಗಳೊಂದಿಗೆ ವೀರೋಚಿತವಾಗಿಯೇ ಜಿದ್ದಾಜಿದ್ದಿನೊಂದಿಗೆ ಪ್ರಬಲವಾಗಿ ಸೆಣಸಾಡಿದರೂ ನಾಲ್ಕನೇ ಸ್ಥಾನ ಪಡೆದಿದೆ. ಭಾರತದ ಮಹಿಳಾ ಹಾಕಿ ತಂಡದವರು‌ ಪದಕಕ್ಕೆ ಕೊರಳೊಡ್ಡಲಾಗದಿದ್ದರೂ ಭಾರತೀಯರ ಹೃದಯ ಗೆದ್ದಿದ್ದಾರೆ. ಈ ಸಾಧನೆಯ ಹಿಂದೆ ಚಿಕ್ಕ ವಯಸ್ಸಿನಲ್ಲಿಯೇ ಜಗತ್ತಿನ ಕ್ರೀಡಾಹಬ್ಬ ಒಲಿಂಪಿಕ್ಸ್ ನ ಹಾಕಿ ಕ್ರೀಡೆಯಲ್ಲಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ ಅಂಕಿತಾ ಸುರೇಶ್ ಅವರ ಹಾಕಿ ಚಳಕ ಕೂಡ ಪ್ರಮುಖ ಪಾತ್ರವಹಿಸಿದೆ.

ಈ ಹಿನ್ನೆಲೆಯಲ್ಲಿ ಅಂಕಿತಾ ನಮ್ಮ ಮನೆಯ ಮಗಳೆಂಬ ಅಭಿಮಾನದಿಂದ ಸುಂಟಿಕೊಪ್ಪದ ನಾಗರಿಕರು ಟೋಕಿಯೋದಿಂದ ತವರಿಗೆ ಹಿಂತಿರುಗಿದ ಅಂಕಿತಾ ಸುರೇಶ್ ಹಾಗೂ ಅವರ ಪತಿ ಹೊನ್ನಂಪಾಡಿ ಸುರೇಶ್ ಅವರನ್ನು ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಹಾರಾರ್ಪಣೆ ಮಾಡಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ತೆರೆದ ವಾಹನದಲ್ಲಿ ಕನ್ನಡ ವೃತ್ತದವರೆಗೆ ಅಂಕಿತಾ ಸುರೇಶ್ ರವರಿಗೆ‌ ಜೈ, ಭಾರತಾಂಬೆಗೆ ಜೈ ಎಂಬ ಘೋಷಣೆಯೊಂದಿಗೆ ಕರೆತರಲಾಯಿತು.

ಪಂಚಾಯತಿ ಅಧ್ಯಕ್ಷರಾದ ಶಿವಮ್ಮ, ಪಂಚಾಯತಿ ಉಪಾಧ್ಯಕ್ಷರಾದ ಪ್ರಸಾದ್ ಕುಟ್ಟಪ್ಪ ಮತ್ತು ಸದಸ್ಯರು, ಬಿಜೆಪಿ ಮುಖಂಡರಾದ ಬಿ.ಬಿ. ಭಾರತೀಶ್, ಒಲಂಪಿಕ್ಸ್ ಮಾಜಿ ಅಥ್ಲೆಟಿಕ್ಸ್ ಕೋಚ್ ಕೊಡಗರಹಳ್ಳಿಯ ಜಗರಂಡ ಅಪ್ಪಚ್ಚು, ನಿವೃತ್ತ ಕರ್ನಲ್ ಬಿಜಿವಿ ಕುಮಾರ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಂಕಿತಾ ಸುರೇಶ್ ರವರಿಗೆ ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಕಿತಾ ಸುರೇಶ್ ಅವರು, ಹಾಕಿ ತಂಡದ ಸಹಾಯಕ ಕೋಚ್ ಆಗಿ ಆಯ್ಕೆಯಾಗಿದ್ದು ಒಮ್ಮೆಲೇ ಆಶ್ಚರ್ಯವಾಗಿತ್ತು. ಭಾರತವು ಹಾಕಿಯಲ್ಲಿ ಬಲಿಷ್ಠ ಎಂಬುದನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದೇವೆ. ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಪ್ರೋತ್ಸಾಹಿಸಿದ್ದು ತಂಡಕ್ಕೆ ಇನ್ನಷ್ಟು ಹುಮ್ಮಸ್ಸು ತುಂಬಿತು. ಪದಕ ಗೆಲ್ಲಲು ಸಾದ್ಯವಾಗದಿದ್ದರೂ ರಾಷ್ಟ್ರದ ಹೆಸರನ್ನು ಉಳಿಸಿದ ಹೆಮ್ಮೆ ನಮಗಿದೆ. ಕೊಡಗಿನ ಹೆಬ್ಬಾಗಿಲಿನಿಂದ ಸುಂಟಿಕೊಪ್ಪ ದವರೆಗೆ ಅದ್ಧೂರಿ ಸ್ವಾಗತ ಕೋರಿರುವುದು ಮರೆಯಲಾರದ ಕ್ಷಣ ಎಂದರು.

ಕಾರ್ಯಕ್ರಮ ಸಂಘಟಕರಾದ ಎಂ.ಎಸ್. ಸುನಿಲ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರಶಾಂತ್ ಸ್ಚಾಗತಿಸಿ ರಾಕೇಶ್ ವಂದಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button