
ಬೆಂಗಳೂರು: ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಶುರುವಾಗಿ ಈಗ ‘ಮಧ್ಯಂತರ’ದಲ್ಲಿರುವ ಆನಂದ್ ಸಿಂಗ್ ರಾಜಕೀಯ ಜೀವನಕ್ಕೆ, ಯಡಿಯೂರಪ್ಪನವರ ‘ಕಾವೇರಿ’ ನಿವಾಸದಲ್ಲಿ ಸಿಕ್ಕ ಗೊತ್ತುಗುರಿ ಏನು?
ಯಡಿಯೂರಪ್ಪನವರ ಜೊತೆ ಸುಮಾರು ಅರ್ಧ ಗಂಟೆ ಚರ್ಚಿಸಿ ಹೊರಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಆನಂದ್ ಸಿಂಗ್ ಹೊರಟಿರುವುದು ಈ ಪ್ರಶ್ನೆಗೆ ಉತ್ತರವನ್ನು ನಿಗೂಢವಾಗಿಯೇ ಇರಿಸಿದೆ.
ಶಾಸಕ ರಾಜುಗೌಡ ಜೊತೆ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ಬಂದ ಆನಂದ್ ಸಿಂಗ್ ನೇರವಾಗಿ ಯಡಿಯೂರಪ್ಪನವರ ಭೇಟಿಗಾಗಿ ಕಾವೇರಿ ನಿವಾಸಕ್ಕೆ ತೆರಳಿದ್ದರು.
ಇದನ್ನೂ ಓದಿ: ರಾಜೀನಾಮೆ ‘ಅಸ್ತ್ರ’ ತೋರಿಸುತ್ತಲೇ ಬಿಎಸ್ವೈ ಹೊಗಳಿದ ಆನಂದ್ ಸಿಂಗ್
ತಾವು ಕೇಳಿದ ಖಾತೆ ಸಿಗಲಿಲ್ಲವೆಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡು, ಖಾತೆ ಬದಲಿಸದಿದ್ದರೆ ರಾಜೀನಾಮೆ ಕೊಡುವ ಮಾತನ್ನಾಡಿದ್ದ ಆನಂದ್ ಸಿಂಗ್ ಅವರ ಮನವೊಲಿಕೆಗೆ ಬಿಜೆಪಿ ಯತ್ನ ಶುರುವಾಗಿತ್ತು. ಯಡಿಯೂರಪ್ಪನವರೇ ಸ್ವತಃ ಈ ವಿಚಾರದಲ್ಲಿ ಬೊಮ್ಮಾಯಿ ನೆರವಿಗೆ ಬಂದಂತಿತ್ತು.
ಅಂತೆಯೇ ಅಸಮಾಧಾನಿತ ಆನಂದ್ ಸಿಂಗ್ ಜೊತೆ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ಯಡಿಯೂರಪ್ಪನವರ ಎದುರಲ್ಲಿಯೂ ಆನಂದ್ ಸಿಂಗ್ ತಮ್ಮ ಪಟ್ಟು ಬಿಡಲಿಲ್ಲವೇ ಎಂಬ ಪ್ರಶ್ನೆಯೆದ್ದಿದೆ.
ಬಿಎಸ್ವೈ ಭೇಟಿ ಬಳಿಕ ವಸಂತನಗರ ನಿವಾಸಕ್ಕೆ ಆನಂದ್ ಸಿಂಗ್ ಹೊರಟಿರುವುದಾಗಿ ತಿಳಿದುಬಂದಿದೆ. ಮತ್ತೂ ಒಂದು ಸುತ್ತಿನ ಮಾತುಕತೆ ಯಡಿಯೂರಪ್ಪ ಮತ್ತು ಆನಂದ್ ಸಿಂಗ್ ಮಧ್ಯೆ ನಡೆಯಲಿದೆ ಎನ್ನಲಾಗಿದೆ.
ಅರಣ್ಯ ಇಲ್ಲವೆ ಇಂಧನ ಖಾತೆಗಾಗಿ ಪಟ್ಟುಹಿಡಿದಿರುವ ಆನಂದ್ ಸಿಂಗ್, ಇದೀಗ ಬಿಜೆಪಿ ಸರ್ಕಾರ ಬರುವುದಕ್ಕೆ ಕಾರಣನಾದ ನನಗೇ ಕೇಳಿದ ಖಾತೆ ಸಿಗಲಿಲ್ಲವೆಂಬ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.



