ಆರ್ಎಸ್ಎಸ್ ಎಂದೂ ಮೀಸಲಾತಿ ಪರವಲ್ಲ; ಮೇಲ್ಜಾತಿಗೆ ಶೇ.10 ಘೋಷಣೆ ಬಳಿಕ ಸುಮ್ಮನಿದೆ: ಸಿದ್ದರಾಮಯ್ಯ

ಮೈಸೂರು: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳು, ಮಹಿಳೆಯರು, ದಲಿತರಿಗೆ ಮೀಸಲಾತಿ ನೀಡುವ ಕಾನೂನು ಜಾರಿಗೊಳಿಸಿದಾಗ ಅದರ ವಿರುದ್ಧ ರಾಮ ಜೋಯ್ಸ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆರ್.ಎಸ್.ಎಸ್ ನಾಯಕರು ಯಾವತ್ತೂ ಮೀಸಲಾತಿ ಪರವಾಗಿರುವವರಲ್ಲ. ಸಾಮಾಜಿಕ ನ್ಯಾಯ, ಸರ್ವಧರ್ಮ ಸಮನ್ವಯ ಸಾರುವ ಸಂವಿಧಾನ ಬದಲಾವಣೆ ಮಾಡಬೇಕು ಎಂಬುದು ಅವರ ಗುಪ್ತ ಅಜೆಂಡಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದುವರೆದ ಜಾತಿಗಳ ಬಡವರಿಗೆ ಶೇ. 10 ಮೀಸಲಾತಿ ಘೋಷಣೆ ಮಾಡಿದ ನಂತರದಿಂದ ಮೀಸಲಾತಿಯ ಬಗ್ಗೆ ಆರ್.ಎಸ್.ಎಸ್ ಧೋರಣೆ ಬದಲಾದಂತೆ ಕಾಣುತ್ತಿದೆ. ಈ ಕಾರಣಕ್ಕಾಗಿ ಬಿಜೆಪಿಯವರು ಮೀಸಲಾತಿ ವಿರುದ್ಧ ಮಾತನಾಡುತ್ತಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮಾಧ್ಯಮ ಹೇಳಿಕೆಯಲ್ಲಿನ ಕೆಲವು ಅಂಶಗಳು: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅವರು ಜಾತಿಗಣತಿ ಏಕೆ ಮಾಡಬಾರದು? ಜಾತಿಗಣತಿ ಮಾಡಿದರೆ ಬಡತನ ರೇಖೆಗಳಿಗಿಂತ ಕೆಳಗಿರುವ, ಅಸ್ಪೃಶ್ಯರಿಗೆ ಸರ್ಕಾರಿ ಯೋಜನೆಗಳ ಮೂಲಕ ವಿಶೇಷ ಗಮನ ನೀಡಲು ಅನುಕೂಲವಾಗಲಿದೆ. ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರ ಬಂದಾಗಲೆಲ್ಲಾ ಜಾತಿಗಣತಿಗೆ ಸಂಬಂಧಿಸಿದಂತೆ ನಿಮ್ಮ ಬಳಿಯಿರುವ ವಸ್ತುನಿಷ್ಠ, ನಂಬಿಕಾರ್ಹ ಮಾಹಿತಿ ಏನು ಎಂದು ನ್ಯಾಯಾಲಯ ಪ್ರಶ್ನಿಸುತ್ತದೆ. ಈ ಕಾರಣಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿಗೆ ಆದೇಶ ಮಾಡಿದ್ದೆ. 1931ರಲ್ಲಿ ದೇಶದಲ್ಲಿ ಕಡೇ ಬಾರಿಗೆ ಜಾತಿಗಣತಿ ನಡೆದದ್ದು. ಈಗಿನ ಬಿಜೆಪಿ ಸರ್ಕಾರ ಸಂವಿಧಾನಕ್ಕೆ 127ನೇ ತಿದ್ದುಪಡಿ ಮಾಡಿ, ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ಮರಳಿ ನೀಡಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿರುವುದು ಸಂವಿಧಾನ ಬಾಹೀರವಾಗುತ್ತದೆ. 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈಗ ಮೀಸಲಾತಿ ಶೇ. 60 ದಾಟಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಮೀಸಲಾತಿ ಪ್ರಮಾಣದ ಮಿತಿಯನ್ನು ದಾಟಬಹುದು ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದ್ದು, ಈ ವಿಶೇಷ ಸಂದರ್ಭಗಳು ಯಾವುದು ಎಂಬುದನ್ನು ರಾಜ್ಯಗಳು ನಿರ್ಧರಿಸಬೇಕು. ತಮಿಳುನಾಡಲ್ಲಿ ಶೇ. 70 ಮೀಸಲಾತಿ ಇದೆ, ಮಹಾರಾಷ್ಟ್ರದಲ್ಲೂ ಮೀಸಲಾತಿ ಪ್ರಮಾಣ ಹೆಚ್ಚಿದೆ. ಕೇಂದ್ರ ಸರ್ಕಾರಕ್ಕೆ ಮೀಸಲಾತಿ ವಿಚಾರದಲ್ಲಿ ಬದ್ಧತೆಯಿದ್ದರೆ ಜಾತಿಗಣತಿ ಮಾಡಲಿ. ಇದರಿಂದ ಸ್ಪಷ್ಟ ಚಿತ್ರಣ ದೊರೆಯಲಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ಆದೇಶಿಸಲಾಗಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಮೈತ್ರಿ ಸರ್ಕಾರದ ವೇಳೆ ಪೂರ್ಣಗೊಂಡಿತ್ತು. ಆಗ ಪುಟ್ಟರಂಗ ಶೆಟ್ಟಿಯವರು ಹಿಂದುಳಿದ ವರ್ಗಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಅವರಿಗೆ ವರದಿ ಸ್ವೀಕರಿಸದಂತೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಕೀತು ಮಾಡಿದ್ದರು. ಈಗ ಬಿಜೆಪಿ ಸರ್ಕಾರವಾದರೂ ವರದಿಯನ್ನು ಸ್ವೀಕರಿಸಿ, ವರದಿ ಬಗ್ಗೆ ಚರ್ಚೆ ಮಾಡಲಿ. ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೂಡಲೇ ವರದಿ ಸ್ವೀಕರಿಸುತ್ತೇವೆ ಎಂದು ಹೇಳಿಕೆಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
