ರಾಜೀನಾಮೆಗೆ ಮುಂದಾಗಿರುವ ಆನಂದ್ ಸಿಂಗ್

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಚಿವ ಆನಂದಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ಈಗಾಗಲೇ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಭೇಟಿಗೆ ಅವಕಾಶ ಕೋರಿರುವ ಅವರು, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಉದ್ದೇಶಿಸಿದ್ದಾರೆ.
ಸ್ಪೀಕರ್ ಕಾಗೇರಿ ಅವರು ಗುರುವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ಎಲ್ಲಾ ಸರಿಹೋಗುತ್ತದೆ: ಸಿಎಂ ಬೊಮ್ಮಾಯಿ
ಆನಂದ್ ಸಿಂಗ್ ನನಗೆ ಮೂರು ದಶಕದ ಗೆಳೆಯರು. ನನ್ನ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಜತೆ ಮಂಗಳವಾರವೂ ಮಾತುಕತೆ ನಡೆಸಿದ್ದೇನೆ. ಅವರ ಎಲ್ಲಾ ವಿಚಾರಗಳನ್ನು ನನಗೆ ತಿಳಿಸಿದ್ದಾರೆ. ನಾನು ಕೂಡ ಅವರಿಗೆ ಹಲವು ವಿಚಾರ ತಿಳಿಸಿದ್ದೇನೆ. ಮತ್ತೆ ಅವರನ್ನು ಕರೆಸಿ ಮಾತನಾಡುತ್ತೇನೆ. ನಂತರ ಎಲ್ಲಾ ಸರಿಹೋಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ನಡುವೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಆನಂದ್ ಸಿಂಗ್ ವಿಷಯ ಕುರಿತು ಈಗಾಗಲೇ ಮಾಹಿತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ.
ತಮ್ಮ ಖಾತೆ ಬದಲಾವಣೆ ಸಂಬಂಧ ತೀವ್ರ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ಪ್ರಬಲ ಖಾತೆಗೆ ಮೊದಲ ದಿನದಿಂದಲೂ ಬಿಗಿಪಟ್ಟು ಹಿಡಿದಿರುವುದನ್ನು ಸ್ಮರಿಸಬಹುದು.
