ಮೈಸೂರು ವಿಭಾಗಕ್ಕೆ ಸಿಗದ ಪ್ರಾತಿನಿಧ್ಯತೆ : ಸಿಎಂ ಬೊಮ್ಮಾಯಿ ಕಾಲದಲ್ಲಿಯೂ ಸಿಗಲಿಲ್ಲ ಮಂತ್ರಿಗಿರಿ

ವರದಿ : ದಯಾಶಂಕರ ಮೈಲಿ
ಮೈಸೂರು: ಹಾಗೇ ನೋಡಿದರೇ… ಬೆಂಗಳೂರು ಆಡಳಿತಾತ್ಮಕ ರಾಜಧಾನಿಯಾದರೂ ಮೈಸೂರು ವಿಭಾಗ ಸಾಂಸ್ಕೃತಿಕ ರಾಜಧಾನಿ. ಮೈಸೂರು ಅರಸರೇ ಬೆಂಗಳೂರಿನ ಅಭಿವೃದ್ದಿಗೆ ಬುನಾದಿ ಹಾಕಿದವರು. ಇದರ ಪರಿಣಾಮ ಬೆಂಗಳೂರು ಕರುನಾಡಿಗೆ ರಾಜಧಾನಿ ಆಗಲು ಸಾಧ್ಯವಾಗಿದ್ದು. ಆದರೆ ಇಂದು ಮೈಸೂರಿನ ಅಭಿವೃದ್ದಿಗೆ ನಿರೀಕ್ಷಿತ ಮಟ್ಟದಲ್ಲೇನು ಆದ್ಯತೆ ನೀಡುತ್ತಿಲ್ಲ ಎಂಬುದಕ್ಕೆ ಈ ಭಾಗಕ್ಕೆ ಮಂತ್ರಿ ಸ್ಥಾನ ನೀಡದೇ ಇರುವುದೇ ಸಾಕ್ಷಿ ಎಂದೇ ಹೇಳುವುದನ್ನು ತಳ್ಳಿ ಹಾಕುವಂತಿಲ್ಲ.
ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೂ ಇಲ್ಲ. ಬೊಮ್ಮಾಯಿ ಆದಾಗಲೂ ಮಂತ್ರಿ ಇಲ್ಲ. 2023 ರ ಚುನಾವಣೆ ನಡೆಯುವುದು ಲೆಕ್ಕಕ್ಕೆ ಒಂದೂವರೆ ವರ್ಷ. ಆದರೆ ಒಂದೆರಡು ತಿಂಗಳು ಇರುವಾಗಲೇ ಚುನಾವಣೆ ಬಿಸಿ ಕಾಯಲಾರಂಭಿಸುತ್ತದೆ. ಬರುವ ಮಾರ್ಚ್ ಗೆ ಮಂಡನೆ ಆಗುವ ಬಜೆಟ್ ಕೊನೆ ಬಜೆಟ್ . ಚುನಾವಣೆ ನಡೆಯುವ 3 ತಿಂಗಳು ಮುಂಚೆ ಸರ್ಕಾರಿ ನೌಕರರ ವೇತನ ಮತ್ತಿತರ ಆಡಳಿತ ವೆಚ್ಚಗಳಿಗೆ ಓಟ್ ಆನ್ ಅಕೌಂಟ್ ಗೆ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ.
ಹೀಗೆ ಒಂದು ವರ್ಷದ 3 ತಿಂಗಳು ಸರ್ಕಾರ ಇರುತ್ತದೆ. ಇರೋದು ಕಡಿಮೆ ಅವಧಿ ಬೇರೆ. ಅದರಲ್ಲೂ ಮಂತ್ರಿ ಸ್ಥಾನವನ್ನು ಸ್ಥಳೀಯರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಈಗಾಗದಲೇ ಪಕ್ಷ ಸಂಘಟನೆ ಮತ್ತು ಅಭಿವೃದ್ದಿ ಸಾಧಿಸುವುದಾದರೂ ಹೇಗೆ ? ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲೇ ಎದುರಾಗಿದೆ.
ಸ್ಥಳೀಯ ನಾಡಿ ಮಿಡಿತ ಬಲ್ಲ ಸ್ಥಳೀಯರಿಗೆ ಮಂತ್ರಿ ಸ್ಥಾನ ನೀಡಿದ್ದರೇ ಪಕ್ಷಕ್ಕೆ ಎಲ್ಲಾ ರೀತಿ ಅನುಕೂಲವಾಗುತ್ತಿತ್ತು. ಅಲ್ಲದೇ ಇಲ್ಲಿ ಸದ್ಯದ ಮಟ್ಟಿಗೆ ಬಲವಾಗಿಯೇ ಇರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಬರುವ ಚುನಾವಣೆಯಲ್ಲಿ ಎದುರಿಸಲು ಪಕ್ಷವನ್ನು ಸಿದ್ದಗೊಳಿಸಬಹುದಿತ್ತು ಅಲ್ಲದೇ ಸಮಸ್ಯೆಗಳಿಗೆ ಮತ್ತು ಅಭಿವೃದ್ದಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ ಹೊರಗಿನವರನ್ನು ಉಸ್ತುವಾರಿ ಮಂತ್ರಿ ಮಾಡಿದರೇ ನಿರೀಕ್ಷೆಯಂತೆ ಪ್ರಗತಿ ಸಾಧ್ಯವಿಲ್ಲ ಎಂದು ಕೂಡ ಹೇಳಲಾಗುತ್ತಿದೆ.
ಮೈಸೂರು ವಿಭಾಗದ ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿಜೆಪಿಯ ಹೆಚ್ಚು ಶಾಸಕರು ಇಲ್ಲ. ಮೈಸೂರು ಜಿಲ್ಲೆಯಲ್ಲಿ ಮೂವರು, ಚಾಮರಾಜನಗರದಲ್ಲಿ ಈಗ ಬಿಎಸ್ಪಿ ಯಿಂದ ಬಂದಿರುವ ಮಹೇಶ್ ಸೇರಿದಂತೆ ಇಬ್ಬರು ಮತ್ತು ಹಾಸನ ಜಿಲ್ಲೆಯಲ್ಲಿ ಓರ್ವ ಶಾಸಕರು ಇದ್ದಾರೆ. ಇವರ ಪೈಕಿ ಒಂದಿಬ್ಬರಿಗೆ ಮಂತ್ರಿ ಸ್ಥಾನ ನೀಡಿದ್ದರೇ ಅಭಿವೃದ್ದಿ ಯನ್ನು ಜನರ ಕಣ್ಣಿಗೆ ಕಾಣುವಂತಾದರೂ ಮಾಡಬಹುದಿತ್ತು
ಅಲ್ಲ ಸಂಖ್ಯೆಯ ಬಿಜೆಪಿ ಶಾಸಕರು ಇರುವ ಕಾರಣದಿಂದ ಮೈಸೂರು ವಿಭಾಗದಲ್ಲಿ ವೀಕ್ ಆಗಿರುವ ಪಕ್ಷವನ್ನು ಬಲಗೊಳಿಸಬಹುದಿತ್ತು. ಈಗ ಬೇರೆ ಹಿರಿಯ ರಾಜಕಾರಣಿ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರೇ ಬೇರೆ ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದಿದ್ದಾರೆ. ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಅಪಾರ ನಂಬಿಕೆ ಹೊಂದಿದ್ದ ಹಿರಿಯ ರಾಜಕಾರಣಿ ಎಸ್.ಎ.ರಾಮದಾಸ್ ಅವರಿಗೂ ಸಚಿವ ಗಿರಿ ಸಿಕ್ಕಿಲ್ಲ. ಅದು ಹೋಗಲಿ. ಇರುವ ಮೂವರು ಕಿರಿಯ ಶಾಸಕರಲ್ಲಿ ಒಬ್ಬರಿಗಾದರೂ ಕೊಟ್ಟಿದ್ದರೇ ಹೇಗೋ ಮ್ಯಾನೇಜ್ ಮಾಡಬಹುದಿತ್ತು ಎಂಬ ಮಾತುಗಳ ಸಹ ವ್ಯಕ್ತವಾಗುತ್ತಿವೆ..
ಮಂತ್ರಿ ಗಿರಿ ನೀಡಿದ್ದರೇ ಈ ಅಭಿವೃದ್ದಿ ಕೆಲಸಗಳಿಗೆ ?
ಈ ಜಿಲ್ಲೆಗಳಲ್ಲಿ ಮೂಲಭೂತ ಸಮಸ್ಯೆಗಳು ಇವೆ. ರಸ್ತೆಗಳು ಮತ್ತು ಕುಡಿಯುವ ನೀರಿನ ಸಮಸ್ಯೆ ಇದೆ. ಮೈಸೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಲು ಎನ್.ಆರ್ .ಕ್ಷೇತ್ರದ ವ್ಯಾಪ್ತಿಯಲ್ಲಿ 8 ಎಕರೆ ಜಾಗವನ್ನು ಕಾಯ್ದಿರಿಸಿ ಹಲವು ವರ್ಷಗಳೇ ಸಂದಿವೆ. ಇದನ್ನು ಕಾರ್ಯಗತ ಮಾಡಬೇಕಿತ್ತು. ಪಾರಂಪರಿಕ ಕಟ್ಟಡಗಳಾದ ಮೈಸೂರಿನ ಲ್ಯಾನ್ಸ್ ಡೌನ್ ಬಿಲ್ಡಿಂಗ್ , ದೇವರಾಜ ಮಾರುಕಟ್ಟೆ ಆಧುನೀಕರಣ ಕಾಮಗಾರಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳು ಸುಧಾರಣೆ ಆಗಬೇಕಿದೆ. ಕೊರೋನ್ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂದುಕೊಂಡಂತೆ ಸೌಲಭ್ಯಗಳು ಸಿಗದೇ ಬಡಜನತೆ ತೊಂದರೆ ಅನುಭವಿಸಿದ್ದಾರೆ. ಒಂದು ವೇಳೆ ಸ್ಥಳೀಕರಿಗೆ ಮಂತ್ರಿ ಗಿರಿ ಸಿಕ್ಕಿದ್ದರೇ ಇತ್ತ ಗಮನಹರಿಸಬಹುದಿತ್ತು ಎಂಬುದು ಸಹ ಸತ್ಯವೇ.
ಉತ್ಸಾಹ ಕಾಣುತ್ತಿಲ್ಲ
ಈಗಾಗಲೇ ಮಂತ್ರಿ ಸ್ಥಾನ ಸಿಗದೇ ಇರುವ ಬಗ್ಗೆ ಮಾಜಿ ಸಚಿವ ಎ.ರಾಮದಾಸ್ , ಕಿರಿಯ ಶಾಸಕರಾದ ನಾಗೇಂದ್ರ ಮತ್ತು ಪ್ರೀತಂಗೌಡ ಅವರು ಅಸಮಾಧಾನವನ್ನು ಸೂಕ್ಷ್ವವಾಗಿಯೇ ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೇ ಬಿಜೆಪಿ ಶಾಸಕರಲ್ಲಿ ಅಷ್ಟೇನು ಉತ್ಸಾಹ ಕಂಡು ಬರುತ್ತಿಲ್ಲ. ಇದನ್ನು ಪಕ್ಷದ ವರಿಷ್ಠರು ಸರಿಪಡಿಸಿದರೇ ಪಕ್ಷ ಸಂಘಟನೆ ಸಾಧ್ಯ. ಇಲ್ಲದಿದ್ದರೇ ಮುಂದೆ ಎದುರಾಗುವ ಚುನಾವಣೆಯನ್ನು ಎದುರಿಸುವುದು ಹೇಗೆ ಎಂಬ ಆತಂಕ ಬಿಜೆಪಿ ಕಾರ್ಯಕರ್ತರಲ್ಲಿ ವ್ಯಕ್ತವಾಗಿದೆ.
ಇಲ್ಲಿಯವರಿಗೆ ಮಂತ್ರಿ ಕೊಟ್ಟಿದ್ದರೇ ಅಭಿವೃದ್ದಿ ಆಗುತ್ತಿತ್ತು: ಶಾಸಕ ತನ್ವೀರ್ ಸೇಠ್
ಮಂತ್ರಿ ಸ್ಥಾನ ಕೊಡೋದು ಬಿಡೋದು ಆ ಪಕ್ಷಕ್ಕೆ ಸಂಬಂಧಿಸಿದ ಸಂಗತಿ. ಇಲ್ಲಿಯವರಿಗೆ ಮಂತ್ರಿ ಕೊಟ್ಟಿದ್ದರೇ ಅಭಿವೃದ್ದಿ ಆಗುತ್ತಿತ್ತು. ಮೈಸೂರು ಜಿಲ್ಲೆ ಮಾತ್ರವಲ್ಲದೇ ನೆರೆ ಜಿಲ್ಲೆಗಳಾದ ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲೂ . ಹತ್ತು ಹಲವು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಬೇಕಿತ್ತು. ಸದ್ಯಕ್ಕೀದು ಸಾಧ್ಯವಾಗದೇ ಮಾತು. ಬೊಮ್ಮಾಯಿ ಸರ್ಕಾರದಲ್ಲಾದರೂ ಮೈಸೂರು ಜಿಲ್ಲೆಗಾದರೂ ಮಂತ್ರಿ ಸ್ಥಾನವನ್ನು ಅಭಿವೃದ್ದಿ ದೃಷ್ಠಿಯಿಂದ ನೀಡಬೇಕಿತ್ತು ಎಂದು ಹೇಳುತ್ತಾರೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್.
ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿಕೆ
ಜಿಲ್ಲೆಗೆ ಮಂತ್ರಿ ಸ್ಥಾನ ನೀಡಿದ್ದರೇ ಅಭಿವೃದ್ದಿ ವೇಗವಾಗಿ ಆಗುತ್ತಿತ್ತು. ಆದರೂ ಉಸ್ತುವಾರಿ ಸಚಿವ ಎಸ್ .ಟಿ. ಸೋಮಶೇಖರ್ ಎಲ್ಲರೂ ಸರಿದೂಗಿಸಿಕೊಂಡು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಸಾ.ರಾ. ಮಹೇಶ್ ಹೇಳುತ್ತಾರೆ.
ಹಾಗೇನು ಇಲ್ಲ ಅಭಿವೃದ್ದಿ ಆಗುತ್ತಿದೆ
ಬಿಜೆಪಿ ಹಿರಿಯ ವಕ್ತಾರ ಎಂ.ಎ.ಮಹೇಶ್ ಅವರು, ಮಂತ್ರಿಗಿರಿ ನೀಡದಿದ್ದರೇ ಅಭಿವೃದ್ದಿ ಆಗುವುದಿಲ್ಲ ಎಂಬುದನ್ನು ಒಪ್ಪುವುದಿಲ್ಲ. ಅಭಿವೃದ್ದಿ ಕೆಲಸಗಳು ಆಗುತ್ತಿವೆ ಎಂದು ಸಮರ್ಥಿಸಿಕೊಳ್ಳುತ್ತಾರೆ.
ಅಯ್ಯೋ ಒಂದೂವರೆ ವರ್ಷದಲ್ಲಿ ಏನ್ ಆಗುತ್ತೇ ಬಿಡಿ.
ಐದು ವರ್ಷಗಳಲ್ಲಿ ಆಗದ ಅಭಿವೃದ್ದಿ ಇನ್ನೂ ಉಳಿದಿರೋ ಒಂದು ವರ್ಷ 3 ತಿಂಗಳಲ್ಲಿ ಆಗುತ್ತಾ , ಅಯ್ಯೋ ಬಿಡಿ ಸ್ವಾಮಿ ಅವೆಲ್ಲ ಆಗಲ್ಲ. ಈಗ ಮಂತ್ರಿ ಪಡೆದುಕೊಂಡು ಏನ್ ಉಪಯೋಗ, ಸ್ಖಳೀಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತಂದರೂ ತನ್ನಿ. ಆ ಅನುದಾನ ತರುವ ಹೊತ್ತಿಗೆ ಚುನಾವಣೆ ಹತ್ತಿರ ಬರುತ್ತದೆ. ಇನ್ನು ಹಂಗೆ ಅಭಿವೃದ್ದಿ, ಅನುದಾನ ಖರ್ಚು ಹೇಳಿ ಎಂದು ಪ್ರಶ್ನಿಸುತ್ತಾರೆ ಮೈಸೂರು ಜಿಲ್ಲೆ ಇಲವಾಲ ಗ್ರಾಮದ ಸಾಮಾಜಿಕ ಕಾರ್ಯಕರ್ತ ನಾಗರಾಜ್.
ಒಟ್ಟಾರೆ ಈ ಬಾರಿ ಸಂಪುಟ ವಿಸ್ತರಣೆ ಸಮಯದಲ್ಲಿ ಮೈಸೂರು ವಿಭಾಗದಲ್ಲಿ ಒಂದಾದರೂ ಮಂತ್ರಿ ಸ್ಥಾನ ಸಿಕ್ಕಿದ್ದರೂ ಕಡಿಮೆ ಅವಧಿಯಲ್ಲಿ ಹೆಚ್ಚೇನು ಅಭಿವೃದ್ದಿ ನಿರೀಕ್ಷೆ ಮಾಡಲು ಆಗುತ್ತಿರಲಿಲ್ಲವಾದರೂ ಅಷ್ಟೇ ಇಷ್ಟೋ ಅಭಿವೃದ್ದಿ ಆಗುತ್ತಿತ್ತು ಎಂಬುದರಲ್ಲೇ ಎರಡು ಮಾತಿಲ್ಲ ಎಂದೇಳಲಿಕ್ಕೆ ಅಡ್ಡಿಯಿಲ್ಲ.




