ಅತಿವೃಷ್ಟಿಗೆ 7800 ಕೋಟಿ ಹಾನಿ; ಸಂತ್ರಸ್ತರ ಖಾತೆಗೆ ಪರಿಹಾರ ಜಮೆಗೆ ಸೂಚನೆ

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾಗುವ ಜನರಿಗೆ ಅಗತ್ಯವಿರುವ ಕಡೆಗಳಲ್ಲಿ ಹೊಸದಾಗಿ ಬಡವಾಣೆ ಅಭಿವೃದ್ಧಿಪಡಿಸಿ ನೀರು, ವಿದ್ಯುತ್ ಸೇರಿ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪುನರ್ವಸತಿ ಕಾಯ್ದೆ ಪ್ರಕಾರ ಸಂತ್ರಸ್ತರಿಗೆ 40×60 ಅಳತೆಯ ನಿವೇಶನದಲ್ಲಿ ಸೂರು ಒದಗಿಸಲು ಸಮರ್ಪಕ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಮುಳುಗಡೆಯಾಗುವ ಗ್ರಾಮಗಳ ಜನರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಮೂಲಸೌಕರ್ಯವನ್ನು ಒದಗಿಸಬೇಕು. ಈ ಹಿಂದೆ 2009-10 ನೇ ಸಾಲಿನಲ್ಲಿ ಪ್ರವಾಹ ಬಂದಾಗ ಕೆಲ ಗ್ರಾಮಗಳನ್ನು ಸ್ಥಳಾಂತರಿಸಿ ‘ಆಸರೆ’ ಮನೆಗಳನ್ನು ನೀಡಲಾಗಿತ್ತು. ಈ ಬಗ್ಗೆ ಪರಿಶೀಲಿಸಿ ಮಾಹಿತಿಯನ್ನು ಒದಗಿಸಬೇಕು ಎಂದು ತಿಳಿಸಿದರು.
ನದಿತೀರದ ಪ್ರದೇಶಗಳಲ್ಲಿ ಮಳೆ ಹಾಗೂ ನೀರು ಹರಿವು ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರವಾಹ ಮುನ್ಸೂಚನೆ ವ್ಯವಸ್ಥೆಯನ್ನು ಬಲಪಡಿಸಲು ತಂತ್ರಜ್ಞಾನ ಆಧಾರಿತ ಮುನ್ಸೂಚನೆ ವ್ಯವಸ್ಥೆ ಕಲ್ಪಿಸಲು ಸೂಕ್ತ ಪ್ರಸ್ತಾವ ಸಲ್ಲಿಸುವಂತೆ ಕೂಡ ಸಭೆಯಲ್ಲಿ ತಿಳಿಸಿದರು.




