ಉಡುಪಿಯಲ್ಲಿ 144 ಸೆಕ್ಷನ್ ಇದ್ದರೂ, ಸಚಿವರಿಗೆ ಮಾತ್ರ ನಿಯಮ ಅನ್ವಯ ಇಲ್ಲ!

ಉಡುಪಿ: ಉಸ್ತುವಾರಿ ಸಚಿವ ವಿ ಸುನೀಲ್ ಕುಮಾರ್ ಇಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಸಚಿವರು ಪ್ರಮಾಣ ವಚನ ಸ್ವೀಕರಿಸಿ, ಉಡುಪಿಗೆ ಆಗಮಿಸುತ್ತಲೇ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂದಿದೆ. ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಅವಕಾಶ ಇಲ್ಲದೇ ಇದ್ದರೂ ಸಚಿವರ ಬೆಂಬಲಿಗರಿಂದ ಭರ್ಜರಿ ಸ್ವಾಗತದ ಜೊತೆಗೆ ಜನ ಜಾತ್ರೆ ಮಾಡಲಾಗಿದೆ.
ಬೆರಳೆಣಿಕೆಯ ಜನರಷ್ಟೇ ಮಾಸ್ಕ್ ಧರಿಸಿದ್ದರು. ಸಾಮಾಜಿಕ ಅಂತರ ಮರೆತೇಬಿಟ್ಟಿದ್ದರು. ನಿಯಮ ಉಲ್ಲಂಘನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ ಕೂಡ ಜೊತೆಯಾದಂತಿತ್ತು.
ಆದರೆ ರಾಜಕೀಯ ನಾಯಕರಿಗೆ ಒಂದು ನ್ಯಾಯ ಜನಸಾಮಾನ್ಯರಿಗೆ ಒಂದು ನ್ಯಾಯ ಎನ್ನುವಂತೆ ಉಡುಪಿ ಜಿಲ್ಲಾಧಿಕಾರಿಯ ನಡೆಯ ಬಗ್ಗೆ ಇದೀಗ ಜನರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬೀದಿ ವ್ಯಾಪಾರಿಗಳು ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರಿಗೆ ಜಿಲ್ಲೆಯಲ್ಲಿ ಕರೋನಾ ನಿಯಮ ಪಾಲನೆಯಾಗುತ್ತದೆ ಅವರುಗಳಿಗೆ ದಂಡವನ್ನು ವಿಧಿಸಲಾಗುತ್ತಿದೆ. ರಾಜಕೀಯ ವ್ಯಕ್ತಿಗಳ ಕಾರ್ಯಕ್ರಮ ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದರೂ ಕೂಡ ಉಡುಪಿ ಜಿಲ್ಲಾಡಳಿತ ಯಾಕೆ ಸುಮ್ಮನಿದೆ ಅನ್ನುವುದೇ ಪ್ರಶ್ನೆಯಾಗಿದೆ.
ಕೇರಳದಲ್ಲಿ ಕೊರೋನಾ ಮೂರನೇ ಅಲೆ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಕಟ್ಟುನಿಟ್ಟಿನ ಎಚ್ಚರವನ್ನು ವಹಿಸಲಾಗುತ್ತಿದ್ದು, ಇದು ಕೇವಲ ಕಾಟಾಚಾರಕ್ಕೆ ಎನ್ನುವಂತೆ ಸಚಿವರ ಈ ಬೃಹತ್ ಮೆರವಣಿಗೆ ಮತ್ತು ಸಭೆ ಸಾಕ್ಷಿಯಾಗಿದೆ. ಜಿಲ್ಲಾಧಿಕಾರಿಗಳೇ ನಿಮ್ಮ ನಿಯಮ ಜನ ಸಾಮಾನ್ಯರಿಗೆ ಮಾತ್ರವೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ.




