ಜಿಲ್ಲಾ ಸುದ್ದಿರಾಜಕೀಯರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡದಲ್ಲಿ ಕೈ ಪಕ್ಷಕ್ಕೆ ಕಾಡುತ್ತಿದೆ ಸಮರ್ಥ ನಾಯಕತ್ವದ ಕೊರತೆ; ಸ್ಥಳಿಯ ಚುನಾವಣೆಗೆ ಕಂಟಕವಾಗುತ್ತಾ..?

ವರದಿ : ಮಂಜುನಾಥ್​ ಡಿ

ಧಾರವಾಡ : ಕಳೆದ ಹಲವು ದಶಕಗಳ ಹಿಂದೆ ಧಾರವಾಡ ಜಿಲ್ಲೆ ಕಾಂಗ್ರೆಸ್ ಭದ್ರ ಕೊಟೆಯಾಗಿತ್ತು. ಆದರೆ ಅದೇ ಜಿಲ್ಲೆಯಲ್ಲಿ ಈಗ ಪಕ್ಷ ಮುನ್ನಡೆಸುವ ಸಮರ್ಥ ನಾಯಕನ ಕೊರತೆ ಎದ್ದು ಕಾಣುತ್ತಿದೆ. ಇದರ ಮಧ್ಯೆ ರಾಜ್ಯ ಚುನಾವಣೆ ಆಯೋಗವು ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಹಾಗೂ ಹು- ಧಾ ಮಾಹಾನಗರ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳತ್ತಿದೆ.‌ ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಲೋಕಲ್ ದಂಗಲ್ ಎದುರಿಸಲು ಇನ್ನೂ ಸಿದ್ಧತೆ ಇಲ್ಲದಿರುವದು ಕೈ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿ ಮಾಡಿದೆ.‌

ಧಾರವಾಡದ 7 ವಿಧಾನ ಸಭಾ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರದಲ್ಲಿ ಕೈ ಪಕ್ಷದ ಶಾಸಕರಿದ್ದು, ಅದರಲ್ಲಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸಾದ್ ಅಬ್ಬಯ್ಯ, ಕುಂದಗೋಳ ವಿಧಾನಸಭಾ ಕ್ಷೆತ್ರದಲ್ಲಿ ಕುಸುಮಾ ಶಿವಳ್ಳಿಯವರು ಶಾಸಕರಾಗಿದ್ದಾರೆ. ಇನ್ನೂ ಈ ಇಬ್ಬರು ಶಾಸಕರು ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಪಕ್ಷ ಮುನ್ನಡೆಸುವ ಬಲ ಕಂಡು ಬರುತ್ತಿಲ್ಲ. ಇನ್ನೂ ಮಾಜಿ ಸಚಿವ ವಿನಯ ಕುಲಕರ್ಣಿಯವರು ಸದ್ಯ ಬಿಜೆಪಿ ಮುಖಂಡ ಯೋಗೇಶಗೌಡ ಕೊಲೆ ಆರೋಪದಲ್ಲಿ ಸಿಲುಕಿಕೊಂಡಿದ್ದು, ಪ್ರಸ್ತುತ ಅವರು ಕೂಡಾ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಆದರೆ ಮುಂಬರುವ ಲೋಕಲ್ ದಂಗಲ್‌ನಲ್ಲಿ ಕೈ ಪಕ್ಷ ಯಾವ ರೀತಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ ಎನ್ನುವುದೇ ಈಗ ಕಾರ್ಯಕರ್ತರಲ್ಲಿ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ರಾಜ್ಯ ಮಟ್ಟದ ನಾಯಕರ ಸ್ವಾಗತಕ್ಕೆ ಮಾತ್ರ ಸಿಮಿತವಾದ ಜಿಲ್ಲಾ ಮಟ್ಟದ ನಾಯಕರು.

ಇನ್ನೂ ಕಾಂಗ್ರೆಸ್‌ ಮಹಾ​ನ​ಗರ ಜಿಲ್ಲಾಧ್ಯಕ್ಷರಾದ ಅಲ್ತಾಫ್ ಹಳ್ಳೂರ ಹಾಗೂ ಗ್ರಾಮೀಣ ಜಿಲ್ಲಾ​ಧ್ಯ​ಕ್ಷರಾದ ಅನಿಲ್ ಕುಮಾರ್ ಪಾಟೀಲ್ ಕೇವಲ ಪಕ್ಷದ ರಾಜ್ಯ ಮಟ್ಟದ ನಾಯಕರು ಅವಳಿನಗರ ಭೇಟಿಗೆ ಬಂದಾಗ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಈ ನಾಯಕರಿಂದ ಜಿಲ್ಲೆಯಲ್ಲಿ ಪಕ್ಷದ ಸಂಘ​ಟನೆ ಹಾಗೂ ಚುನಾ​ವಣೆ ಎದು​ರಿ​ಸು​ವುದು ಕಷ್ಟ ಸಾಧ್ಯ‌ವೆಂದೇ ಹೇಳಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದಾಗ ಇಡೀ ಜಿಲ್ಲೆ​ಯನ್ನು ಮುನ್ನಡೆ​ಸುವ ಮುಖಂಡರ ಕೊರತೆ ಕಾಂಗ್ರೆಸ್‌ ಪಕ್ಷ​ದಲ್ಲಿ ಈಗ ಹೆಚ್ಚಾ​ಗಿಯೇ ಕಂಡು ಬರುತ್ತಿದೆ. ಮಾಜಿ ಸಚಿವ ವಿನಯ ಕುಲಕರ್ಣಿಯವರು ಪ್ರಕರಣದಲ್ಲಿ. ಸಿಬಿಐನಿಂದ ಬಂಧನಕ್ಕೆ ಒಳಗಾದ ನಂತರ, ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಸಮರ್ಥ ನಾಯಕರಿಲ್ಲದೆ ಮುಂದೆನೂ ಎಂಬ ಪ್ರಶ್ನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಹಲವು ಕೈ ನಾಯಕರಿದ್ದರೂ ಅವರು ಕೇವಲ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ಇದೂ ಕೂಡಾ ಪಕ್ಷ ಸಂಘಟನೆಗೆ ಪರೋಕ್ಷವಾಗಿ ಹೊಡೆತ ನೀಡುತ್ತಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.‌ ಇನ್ನೂ ಜಿಲ್ಲೆಯಲ್ಲಿ ಪಕ್ಷದ ಶಾಸಕರ ಸಂಖ್ಯೆ ಕಡಿಮೆಯಾದರೂ ಬುದ್ದಿ ಕಲಿಯದ ಕಾಂಗ್ರೆಸ್ ಪಕ್ಷದ ನಾಯಕರು, ಬಿಜೆಪಿ ವಿರುದ್ಧ ಒಗಟ್ಟಿನ ಹೋರಾಟ ಮಾಡುವಲ್ಲಿ ಹಿಂದೆ ಬಿದ್ದಿರುವದು ಸ್ಪಷ್ಟವಾಗಿ ಕಂಡುಬರುತ್ತಿದೆ. ರಾಜ್ಯ ಮಟ್ಟದ ನಾಯಕರ ಗುಂಪುಗಾರಿಕೆಯು ಜಿಲ್ಲೆಯಲ್ಲಿಯು ಕಂಡು ಬರುತ್ತಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಕೈ ಪಕ್ಷಕ್ಕೆ ಮತ್ತಷ್ಟು ಹೊಡೆತ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.

ಕಲಘಟಗಿಯಲ್ಲಿ ಸಂತೋಷ ಲಾಡ್ v/s ಎಂಎಲ್ಸಿ ನಾಗರಾಜ್ ಛಬ್ಬಿ

ಕಳೆದ ಬಾರಿ ತಮ್ಮ ಕ್ಷೇತ್ರದಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುವುದಿಲ್ಲ ಎಂಬ ಮುಖ್ಯ ಕಾರಣ ಇಟ್ಟುಕೊಂಡು ಕಲಘಟಗಿ ಕ್ಷೇತ್ರದ ಮತದಾರರು ಲಾಡ್ ಅವರನ್ನು ಕಳೆದ ಬಾರಿ ಕೈ ಬಿಟ್ಟಿದ್ದರು. ಆದರೆ ಈಗ ಮತ್ತೊಮ್ಮೆ ಅದಕ್ಕೆ ಅವಕಾಶ ಕೋಡಬಾರದು ಎಂಬ ನಿಟ್ಟಿನಲ್ಲಿ ಕಲಘಟಗಿ ಕ್ಷೇತ್ರಕ್ಕೆ ಲಾಡ್ ಅವರು ಎಂಟ್ರಿ ಕೊಟ್ಟಿದ್ದು, ಅಲ್ಲಿಯು ಕೂಡಾ ಲಾಡ್ ಅವರಿಗೆ ಈಗ ಅವರದೇ ಪಕ್ಷದ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಛಬ್ಬಿಯರ ಪೈಪೋಟಿ ನೀಡುತ್ತಿದ್ದಾರೆ. ಕಲಘಟಗಿ ಕ್ಷೇತ್ರದಲ್ಲಿ ಈಗಾಗಲೇ ಕಳೆದ ಹಲವು ವರ್ಷಗಳಿಂದ ನಾಗರಾಜ್ ಛಬ್ಬಿಯವರು ಪಕ್ಷ ಸಂಘಟನೆ ಜೊತೆಗೆ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪರೋಕ್ಷವಾಗಿ ಕಲಘಟಗಿಯಿಂದ ಸ್ಪರ್ಧೆ ಮಾಡುವ ಮುನ್ಸೂಚನೆ ನೀಡುತ್ತಿದ್ದಾರೆ. ಇದೀಗ ಕಲಘಟಗಿಯಲ್ಲಿ ಲಾಡ ಹಾಗೂ ನಾಗರಾಜ್ ಛಬ್ಬಿಯವರ ಎರಡು ಬಣವಾಗಿ ಕಂಡು ಬರುತ್ತಿವೆ.

ಮೂಲ ಕೈ ಕಾರ್ಯಕರ್ತರಲ್ಲಿ ಕಡಿಮೆಯಾಗದ ಪಕ್ಷದ ಮೇಲಿನ ಅಭಿಮಾನ

ಇನ್ನೂ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಇತ್ತೀಚೆಗೆ ಗುಂಪುಗಾರಿಕೆ ಹೆಚ್ಚಾಗಿ ಕಂಡು ಬರುತ್ತಿದ್ದು, ಇದರ ಮಧ್ಯೆಯೂ ಮೂಲ ಕೈ ಕಾರ್ಯಕರ್ತರಲ್ಲಿ ಪಕ್ಷದ ಮೇಲಿನ ಅಭಿಮಾನ ಕಳೆದುಕೊಂಡಿಲ್ಲ. ಈಗಲೂ ಕೂಡಾ ಪಕ್ಷ ಸಂಘಟನೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯ ಮಟ್ಟದ ನಾಯಕರು ಹಾಗೂ ಜಿಲ್ಲಾ ಮಟ್ಟದ ನಾಯಕರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕಿದೆ. ಈಗಾಗಲೇ ಮುಂಬರುವ ವಿಧಾನ ಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ಪಕ್ಷ ಲೊಕಲ್ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈಗಲ್ಲಾದರೂ ಜಿಲ್ಲಾ ಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರು ಎಚ್ಚೆತ್ತುಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕಿದೆ. ಆಗ ಮಾತ್ರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲ ಹೆಚ್ಚಿಸಲು ಸಾಧ್ಯ ಎನ್ನುತ್ತಾರೆ ಹಿರಿಯ ರಾಜಕೀಯ ನಾಯಕರುಗಳು.

Spread the love

Related Articles

Leave a Reply

Your email address will not be published. Required fields are marked *

Back to top button