Breaking NewsLatestರಾಜಕೀಯರಾಷ್ಟ್ರೀಯ

ಮಾಧ್ಯಮ ವರದಿಗಳು ನಿಜವಾಗಿದ್ದಲ್ಲಿ ಪೆಗಾಸಸ್ ದುರ್ಬಳಕೆ ಗಂಭೀರ: ಸುಪ್ರೀಂ ಕೋರ್ಟ್

ನವದೆಹಲಿ: ಪೆಗಾಸಸ್ ಹಗರಣ ವಿಚಾರವಾಗಿ ಮಾಧ್ಯಮ ವರದಿಗಳು ನಿಜವೇ ಆಗಿದ್ದಲ್ಲಿ ಇದು ನಿಜಕ್ಕೂ ಗಂಭೀರ ವಿಚಾರವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರತಿಪಕ್ಷ ನಾಯಕರು, ಪತ್ರಕರ್ತರು ಮತ್ತಿತರರ ವಿರುದ್ಧ ಪೆಗಾಸಸ್ ಗೂಢಚರ್ಯೆ ಕುರಿತಂತೆ ಮಾಧ್ಯಮ ವರದಿಗಳು ನಿಜವೇ ಆಗಿದ್ದಲ್ಲಿ ಇದು ನಿಜಕ್ಕೂ ಗಂಭಿರ ಆರೋಪ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪೆಗಾಸಸ್ ಹಗರಣ ಕುರಿತು ವಿಶೇಷ ತನಿಖೆಯಾಗಬೇಕು ಎಂದು ಕೋರಿರುವ ಹಲವು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದ ಸಿಜೆಐ ಎನ್​ವಿ ರಮಣ ನೇತೃತ್ವದ ದ್ವಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜಸ್ಟೀಸ್ ಸೂರ್ಯಕಾಂತ್ ಈ ಪೀಠದಲ್ಲಿರುವ ಇನ್ನೊಬ್ಬ ನ್ಯಾಯಮೂರ್ತಿಯಾಗಿದ್ದಾರೆ. ಮುಂದಿನ ಮಂಗಳವಾರ ಅರ್ಜಿಗಳನ್ನು ಪೀಠ ಕೈಗೆತ್ತಿಕೊಳ್ಳಲಿದೆ.

ವಿಚಾರಣೆ ವೇಳೆ ಕೇಂದ್ರದ ಉಪಸ್ಥಿತಿಗೆ ಸೂಚಿಸಿರುವ ಪೀಠ, ಸತ್ಯ ಹೊರಬರಬೇಕು. ಯಾರ್ಯಾರ ಹೆಸರುಗಳು ಅದರಲ್ಲಿವೆ ಎಂಬುದು ಗೊತ್ತಿಲ್ಲ ಎಂದಿದೆ.

ಸ್ಪೈವೇರ್ ಕಾಂಟ್ರ್ಯಾಕ್ಟ್ ಮತ್ತು ಟಾರ್ಗೆಟ್ ಆದವರ ಪಟ್ಟಿಯನ್ನು ಕೇಂದ್ರ ಸರ್ಕಾರದಿಂದ ಕೇಳಬೇಕೆಂದು ಕೋರಿ ಭಾರತೀಯ ಸಂಪಾದಕರ ಗಿಲ್ಡ್ ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.

ಇದಕ್ಕಿಂತಲೂ ಮುಂಚೆ ಸೆಪಿಎಂ ಸಂಸದ ಜಾನ್ ಬ್ರಿಟ್ಟಸ್ ಮತ್ತು ಎಂಎಲ್ ಶರ್ಮಾ ಎಂಬ ವಕೀಲರು ಇದೇ ಹಗರಣದ ವಿಚಾರವಾಗಿ ಸುಪ್ರಿಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದಕ್ಕೂ ಮುಂಚೆ ಹಿರಿಯ ಪತ್ರಕರ್ತರುಗಳಾದ ಎನ್ ರಾಮ್ ಮತ್ತು ಶಶಿಕುಮಾರ್ ಪೆಗಾಸಸ್ ಗೂಢಚರ್ಯೆ ಆರೋಪದ ಬಗ್ಗೆ ವಿಶೇಷ ತನಿಖೆಗೆ ಕೋರಿದ್ದರು. 2019ರಿಂದ ಈ ವಿಚಾರ ವರದಿಯಾಗುತ್ತಿದೆ. ನೀವೇಕೆ ಎರಡು ವರ್ಷಗಳ ನಂತರ ಬಂದಿದ್ದೀರಿ ಎಂದು ಸಿಜೆಐ ಎನ್​ವಿ ರಮಣ ಪ್ರಶ್ನಿಸಿದ್ದರು.

ಪೆಗಾಸಸ್ ಹಗರಣ ತನಿಖೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿಚಾರಣಾ ಆಯೋಗವನ್ನೇ ರಚಿಸಿದ್ದಾರೆ.

ದಿ ವೈರ್ ಸೇರಿದಂತೆ ಪ್ರಮುಖ ಪ್ರಕಾಶನಗಳನ್ನು ಒಳಗೊಂಡ ಜಾಗತಿಕ ಮಾಧ್ಯಮ ತನಿಖೆಯಲ್ಲಿ ಬಯಲಾಗಿರುವ ಸತ್ಯದ ಪ್ರಕಾರ, ಭಾರತದಲ್ಲಿನ 300 ಫೋನ್​ಗಳು ಪೆಗಾಸಸ್​ನ ಟಾರ್ಗೆಟ್ ಆಗಿವೆ. ಆದರೆ ಆ ಎಲ್ಲ ಫೋನ್​ಗಳು ಹ್ಯಾಕ್ ಆಗಿವೆಯೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರ ನಿಪುಣ ಪ್ರಶಾಂತ್ ಕಿಶೋರ್, ಇಬ್ಬರು ಕೇಂದ್ರ ಮಂತ್ರಿಗಳು, ಮಾಜಿ ಚುನಾವಣಾ ಆಯುಕ್ತ, 40 ಪತ್ರಕರ್ತರು ಟಾರಗೆಟ್ ಆದವರ ಪಟ್ಟಿಯಲ್ಲಿದ್ದಾರೆ.

ಹಗರಣದ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದರೆ, ಕೇಂದ್ರ ಸರ್ಕಾರ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button