ಕಾಫಿನಾಡಿಗೆ ತಪ್ಪಲಿಲ್ಲ ಹೊರಗಿನವರ ಉಸ್ತುವಾರಿ ಹೊಣೆ

ಕಿರುಗುಂದ ರಫೀಕ್
ಚಿಕ್ಕಮಗಳೂರು: ಜಿಲ್ಲೆಗೆ ಮತ್ತೆ ಹೊರಗಿನವರೇ ಉಸ್ತುವಾರಿ ಹೋಣೆ ಹೊರಬೇಕಾದ ಪರಿಸ್ಥಿತಿ ಬಂದೊದಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಆರಗ ಜ್ಞಾನೇಂದ್ರ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ನೇಮಿಸಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಚಿಕ್ಕಮಗಳೂರು ಜಿಲ್ಲೆಗೆ ಇದೇ ಗತಿಯಾಗಿದೆ. ಹೊರಗಿನವರೇ ಉಸ್ತುವಾರಿ ಸಚಿವರಾಗುತ್ತಿದ್ದಾರೆ. ಕಳೆದ 2004ರಿಂದ ಈಚೆಗೆ ಜಿಲ್ಲೆಯವರು ಯಾರೂ ಸರಿಯಾಗಿ ಉಸ್ತುವಾರಿ ಸಚಿವರಾಗಿಲ್ಲ. ಒಂದು ಬಾರಿ ಶೃಂಗೇರಿಯ ಡಿ.ಎನ್.ಜೀವರಾಜ್ ಮತ್ತೊಮ್ಮೆ ಸಿ.ಟಿ.ರವಿ ಅಲ್ಪಾವಧಿಗೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ಬಾರಿಯೂ ಉಸ್ತುವಾರಿ ಹೊಣೆ ಮತ್ತೆ ಹೊರಗಿನವರ ಹೆಗಲಿಗೆ ಬಿದ್ದಿದೆ.
ಬಿಜೆಪಿಯ ʼಬಣ ರಾಜಕೀಯʼದ ಪರಿಣಾಮ ಜಿಲ್ಲೆಯಲ್ಲಿ ಯಾರೂ ಮಂತ್ರಿಗಳಾಗಲು ಅವಕಾಶ ಸಿಗುತ್ತಿಲ್ಲ. ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು. ಘಟಾನುಘಟಿಗಳಾಗಿದ್ದ ಡಿ.ಬಿ.ಚಂದ್ರೇಗೌಡ, ಬಿ.ಎಲ್.ಶಂಕರ್, ಸಗೀರ್ ಅಹಮ್ಮದ್, ಮೋಟಮ್ಮ, ಬಿ.ಬಿ ನಿಂಗಯ್ಯ ಮಂತ್ರಿಗಳಾಗಿ ಗುರುತಿಸಿಕೊಂಡಿದ್ದರು. ಆಗ ಅವರಲ್ಲಿ ಯಾರಾದರೂ ಓರ್ವರು ಉಸ್ತುವಾರಿ ಸಚಿವರಾಗಿರುತ್ತಿದ್ದರು. ಆದರೆ ಜಿಲ್ಲೆಯ ಸಮಸ್ಯಗಳಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ವಿಫಲರಾಗುತ್ತ ಬಂದಿದ್ದರಿಂದ ಅವರೆಲ್ಲಾ ತೆರೆಮರೆಗೆ ಸರಿದಿದ್ದಾರೆ.
ಹಲವು ಬಾರಿ ರಾಜ್ಯದಲ್ಲೊಂದು ಪಕ್ಷ, ಕೇಂದ್ರದಲ್ಲೊಂದು ಪಕ್ಷ ಆಡಳಿತ ನಡೆಸುವಾಗ ಅಭಿವೃದ್ಧಿಯಾಗುವುದು ಮರೀಚಿಕೆ ಎಂಬಂತಿತ್ತು. ಆದರೆ ಈಗ ಹಾಗಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿದೆ. ಈ ಬಾರಿಯಾದರೂ ಸಚಿವಸ್ಥಾನ ಸಿಕ್ಕಿದ್ದರೆ ಒಂದಷ್ಟು ಅಭಿವೃದ್ಧಿಯಾದರೂ ನಿರೀಕ್ಷಿಸಬಹುದಿತ್ತು. ಈಗ ಅದೂ ಇಲ್ಲದಂತಾಗಿದೆ ಎನ್ನುತ್ತಿದ್ದಾರೆ ಜಿಲ್ಲೆಯ ಜನ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಆರಗ ಜ್ಞಾನೇಂದ್ರ ಪಕ್ಕದ ಜಿಲ್ಲೆಯ ಮಲೆನಾಡು ಪ್ರದೇಶದವರೇ ಆಗಿರುವುದರಿಂದ ಇಲ್ಲಿನ ಜ್ವಲಂತ ಸಮಸ್ಯೆಗಳು ಗೊತ್ತಿರಬಹುದು. ಹೀಗಾಗಿ ಜನ ಸಹಜವಾಗಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಈವರೆಗಿನ ಕೆಲ ಉಸ್ತುವಾರಿ ಸಚಿವರು ನಾಮಕಾವಸ್ಥೆಗೆ ಬರುತ್ತಿದ್ದ ಹಾಗೆ ಇವರೂ ಬಂದ ಪುಟ್ಟ, ಹೋದ ಪುಟ್ಟ ಎಂಬಂತಾದರೆ ಏನೂ ಪ್ರಯೋಜನವಾಗದು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.




