ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಅರಳಲು ಕಾರಣ ಏನು?: ಕಲಬುರಗಿಯಲ್ಲಿ ಕೈ ಮಾಡುತ್ತಿದೆಯಾ ಎಡವಟ್ಟು?

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಅಧಿಪತ್ಯ ಸಾಧಿಸಿ ಕಾಂಗ್ರೆಸ್ ಭದ್ರಕೋಟೆ ಅಂತಾನೆ ಕರೆಸಿಕೊಂಡಿದ್ದ ಕಲಬುರ್ಗಿ ಮಹಾನಗರ ಪಾಲಿಕೆ ಇದೀಗ ಕಾಂಗ್ರೆಸ್ ಗೆ ಕೈಕೊಟ್ಟು ಕಮಲದ ಮಡಲಿನತ್ತ ವಾಲುತ್ತಿರುವದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕಳೆದ ಸುಮಾರು 40 ವರ್ಷಗಳಿಂದ ಕೇಸರಿ ಪಡೆಗೆ ಒಲಿಯದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿಗ ಕೇಸರಿ ಪಡೆ ಚಿಗರೊಡಿಯುತ್ತಿದೆ. 2013 ರ ಪಾಲಿಕೆ ಚುನಾವಣೆ ತನಕ ಕೈ ಪಡೆ ಮುಂದೆ ಕೇಸರಿ ಮಕಾಡೆ ಮಲಗುತಿತ್ತು. ಆದ್ರೆ 2013ರ ನಂತರ ಚುನಾವಣೆಯಲ್ಲಿ ಕಮಲ ಅರಳುತ್ತಲೇ ಬರುತ್ತಿದೆ.
ಮೊದಲನೇ ಬಾರಿಗೆ ಆಡಳಿತ ಚುಕ್ಕಾಣೆ:
2013 ರ ಗುಲ್ಬರ್ಗಾ ಮಹಾನಗರ ಪಾಲಿಕೆಯ 55 ವಾರ್ಡ್ ಗಳ ಪೈಕಿ 23 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಉಳಿದ ಪಕ್ಷಗಳು ಹೀನಾಯ ಸೋಲನ್ನುಭಿಸಿದವು. ಬಿಜೆಪಿ 7, ಜನತಾದಳ (ಜಾತ್ಯತೀತ) 10, ಕೆಜೆಪಿ 7, ಪಕ್ಷೇತರರು 6, ಇತರೆ 2 ಅಭ್ಯರ್ಥಿಗಳು ಗೆದ್ದಿದ್ದರು. ಕಾಂಗ್ರೆಸ್ ಪರ ಗಾಳಿ ಮುಂದುವರೆದಿರುವದು ಆ ವರ್ಷವು ಸ್ಪಷ್ಟವಾಗಿತ್ತು. ಆದ್ರೆ ಕಾಂಗ್ರೆಸ್ ಪಕ್ಷದ ಆಂತರಿಗೆ ಸಮಸ್ಯೆಯಿಂದಾಗಿ ಬಿಜೆಪಿ ಇತರೆ ಸದಸ್ಸರ ಬೆಂಬಲ ಹಾಗೂ ಬಂಡಾಯ ಕಾಂಗ್ರೆಸ್ ಸದಸ್ಸರ ಬೆಂಬಲ ಪಡೆದು ಬಿಜೆಪಿ ಆಡಳಿತ ಚುಕ್ಕಾಣೆ ಹಿಡಿದಿತ್ತು. ನಂತರ 2018 ರಲ್ಲಿ ನಡೆಯಬೇಕಿದ್ದ ಚುನಾವಣೆ ವಾರ್ಡ್ ವರ್ಗೀಕರಣ ಸೇರಿದಂತೆ ಇತರೆ ತಾಂತ್ರೀಕ ಕಾರಣಗಳಿಂದ ಚುನಾವಣೆ ಮುಂದೂಡುತ್ತಲೆ ಬರಲಾಗಿತ್ತು. ಇದೀಗ ಮತ್ತೊಮ್ಮೆ ಪಾಲಿಕೆ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷದ ಸರಿಸಮಾನವಾಗಿ ಬಿಜೆಪಿ ಹೆಜ್ಜೆ ಇಡುವಲ್ಲಿ ಯಶಸ್ವಿ ಕಂಡಿದೆ.
ಬಿಜೆಪಿ ಸಾಧನೆ ಕಾಂಗ್ರೆಸ್‌ಗೆ ಆತಂಕ:
ಇಂದಿನ ಪಾಲಿಕೆ ಚುನಾವಣೆ 2021ರಲ್ಲಿ ಕಾಂಗ್ರೆಸ್ 27 ಸ್ಥಾನ ಗಳಿಸಿದ್ರೆ ಸರಿಸಮಾನವಾಗಿ ಬೆನ್ನಟ್ಟಿದ ಬಿಜೆಪಿ 23 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ 4 ಜೆಡಿಎಸ್ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದೊಂದಿಗೆ ಸೇರಿ ಕಲಬುರ್ಗಿಯಲ್ಲಿ ಬಿಜೆಪಿ ಅಧಿಪತ್ಯ ಸಾಧಿಸಲು ಈಗಾಗಲೇ ರಣತಂತ್ರ ರೂಪಿಸಲು ಆರಂಭಿಸಿದೆ. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ತವರಾಗಿರುವ ಕಲಬುರಗಿಯಲ್ಲಿ ಕಾಂಗ್ರೆಸ್ ಭದ್ರಕೋಟೆ ನಿಧಾನವಾಗಿ ಚಿದ್ರವಾಗುತ್ತಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗತೊಡಗಿದೆ. ಹೇಳ ಹೆಸರು ಇಲ್ಲದಂತಿರುತ್ತಿದ್ದ ಬಾಜಪ ಈಗ ತನ್ನ ಸರಿಸಮ ಬಲದಲ್ಲಿ ನಿಲ್ಲುತ್ತಿರುವದು ಕೇಸರಿ ಪಡೆಯಲ್ಲಿ ಉತ್ಸಾಹ ಹೆಚ್ಚಿಸಿದ್ರೆ ಕೈಪಡೆಯಲ್ಲಿ ಒಳೊಳಗೆ ಆತಂಕ ಹುಟ್ಟಿಸುತ್ತಿದೆ.
ನಾಯಕರ ಇಚ್ಚಾಶಕ್ತಿ ಕೊರತೆ ಸೋಲಿಗೆ ಕಾರಣ?:
ಕಾಂಗ್ರೆಸ್ ಸೋಲಿಗೆ ಬಿಜೆಪಿಯ ಸತತ ಪ್ರಯತ್ನ ಕಾರಣ ಒಂದಡೆಯಾದ್ರೆ ಇನ್ನೊಂದಡೆ ಕಾಂಗ್ರೆಸ್ ನಾಯಕರಲ್ಲಿ ತಾಳಮೇಳ ತಪ್ಪುತ್ತಿರುವದು ಇನ್ನೊಂದು ಕಾರಣ ಎನ್ನಲಾಗುತ್ತಿದೆ. ಪಾಲಿಕೆಯ ಪ್ರತಿ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಶಾಸಕ ಖಮರುಲ್ ಇಸ್ಲಾಂ ನಿಧನದಿಂದ ಇಲ್ಲಿನ ರಾಜಕೀಯ ಚದುರಂಗದಾಟಕ್ಕೆ ಹಿನ್ನಡೆ ಆಗಿದೆ ಅಂತ ಸ್ವತಾಃ ಖಮರುಲ್ ಇಸ್ಲಾಂ ಅವರ ಪತ್ನಿ ಶಾಸಕಿ ಖನೀಜಾ ಫಾತಿಮಾ ಹೇಳಿದ್ದಾರೆ. ಮತ್ತೊಂದಡೆ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಮಾಜಿ ಸಿಎಂ ಎನ್ ಧಮಸಿಂಗ್ ನಿಧನದ ಹಿನ್ನಲೆ ಅವರ ಅನುಪಸ್ಥಿತಿ ಇದ್ದರೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಕಾರಣ ಕಲಬುರಗಿ ರಾಜಕಾರಣದತ್ತ ಇಚ್ಚಾಶಕ್ತಿ ಕಳೆದುಕೊಂಡಿದ್ದಾರೆ. ಇಂತಹ ಹಲವು ಕಾರಣಗಳಿಂದ ಘಟಾನುಘಟಿ ನಾಯಕರ ಅನುಪಸ್ಥಿತಿ ಕಾಂಗ್ರೆಸ್ ಭದ್ರಕೋಟೆ ಒಡೆಯಲು ಕಾರಣವಾಗಿದೆ. ಮಾತ್ರವಲ್ಲ ಟಿಕೆಟ್ ಹಂಚಿಕೆಯಲ್ಲಿಯೂ ನಾಯಕರುಗಳು ಪ್ರಭಾವ ಬಿರಿದ್ದು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಅಂತ ವಿಶ್ಲೇಷಿಸಲಾಗುತ್ತಿದೆ. ಜೇವರ್ಗಿ ಶಾಸಕ ಅಜಯ್ ಸಿಂಗ್ ಸೇರಿ ಇತರೆ ನಾಯಕರು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೇಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಅಭ್ಯರ್ಥಿಗಳ ಪರವಾಗಿ ನಾಯಕರು ಸಮರ್ಪಕ ಪ್ರಚಾರ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ರಣತಂತ್ರ ರೂಪಿಸಲು ವಿಫಲವಾಗಿ ಸೋಲಿನ ಕಹಿ ಅನುಭವಿಸಿದ್ದಾರೆ ಅಂತ ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ.
ಬಿಜೆಪಿ ನಾಯಕರ ವರ್ಕೌಟ್ ಸಫಲ:
ಕಾಂಗ್ರೆಸ್ ತನ್ನ ನಾಯಕರನ್ನು ಕರೆಸಿ ಪ್ರಚಾರ ಮಾಡುವಲ್ಲಿ ಹಿನ್ನಡೆ ಅನುಭವಿಸಿದೆ. ಇದನ್ನೇ ನಗದೀಕರಣ ಮಾಡಿಕೊಂಡ ಬಿಜೆಪಿ ನಾಯಕರು ತಮ್ಮ ಘಟಾನುಘಟಿ ನಾಯಕರನ್ನು ಕರೆಸಿ ಪ್ರಚಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ, ಸಚಿವರಾದ ಬೈರತಿ ಬಸವರಾಜ್, ಶ್ರೀರಾಮುಲು, ಮುರುಗೇಶ್ ನಿರಾಣಿ, ನಾಗೇಶ್ ಸೇರಿದಂತೆ ಅನೇಕ ನಾಯಕರು ವಿಧಾನಸಭೆ ಚುನಾವಣೆ ಮಾಧರಿಯಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದರು. ಅಲ್ಲದೆ ಕಲಬುರ್ಗಿಯಲ್ಲಿಯೇ ಟಿಕಾಣಿ ಹೂಡಿದ ರಾಜಕೀಯ ಚದುರಂಗದಾಟದ ಕಿಲಾಡಿ ಅಂತಲೇ ಹೆಸರು ಪಡೆದ ಬಿಜೆಪಿ ಕಾರ್ಯದರ್ಶಿ ಎನ್. ರವಿಕುಮಾರ್ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆ ಆಗಲು ಕಾರಣವಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ತನಗರಿವಿಲ್ಲದಂತೆ ಮಾಡುತ್ತಿರುವ ಚಿಕ್ಕಪುಟ್ಟ ತಪ್ಪುಗಳನ್ನೇ ನಗದೀಕರಣ ಮಾಡಿಕೊಂಡು ಭದ್ರಕೊಟೆ ಒಡೆದು ತನ್ನ ಮಡಲಿಗೆ ಹಾಕಿಕೊಳ್ಳಲು ಬಿಜೆಪಿ ಮಾಡಿದ ಪ್ರಯತ್ನ ಸಫಲಗೊಂಡಿದೆ ಅಂತ ರಾಜಕೀಯ ವಿಶ್ಲೇಷಕರ ಅನಿಸಿಕೆಯಾಗಿದೆ.
