ಒಗ್ಗರಣೆಗೆ ಮಾತ್ರ ಸೀಮಿತವಲ್ಲ ಸಾಸಿವೆ…!

ಪವಿತ್ರಾ ಶೆಟ್ಟಿ
ಸಾಸಿವೆ ಎಂದಾಕ್ಷಣ ನಿಮಗೆ ಒಗ್ಗರಣೆಯ ನೆನಪಾಗುವುದು ಸಹಜ. ಒಗ್ಗರಣೆಗೆ ಹೊರತಾಗಿ ಸಾಸಿವೆಯಿಂದ ಹಲವು ಆರೋಗ್ಯದ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ವಿನಾಕಾರಣ ಕಾಡುವ ತಲೆನೋವು ಹೋಗಲಾಡಿಸಲು ನೀವು ಸಾಸಿವೆಯನ್ನು ಬಳಸಬಹುದು. ಮೈಗ್ರೇನ್ ದೂರಮಾಡುವ ಶಕ್ತಿಯೂ ಸಾಸಿವೆಗಿದೆ. ಅದು ನರಮಂಡಲದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಸಾಸಿವೆಯನ್ನು ಪುಡಿ ಮಾಡಿ ತೆಂಗಿನೆಣ್ಣೆಯೊಂದಿಗೆ ಬೆರೆಸಿ ನೆತ್ತಿಗೆ ಹಚ್ಚಿಕೊಂಡರೆ ತಲೆನೋವು ದೂರವಾಗುತ್ತದೆ.
ಸಾಸಿವೆಗೆ ಪಿತ್ತ ಹಾಗೂ ಕಫದಂತಹ ಸಮಸ್ಯೆಯನ್ನು ದೂರ ಮಾಡುವ ಗುಣವಿದೆ. ಸಾಸಿವೆ ಬೀಜಗಳನ್ನು ಪುಡಿ ಮಾಡಿ ಬೆಳಿಗ್ಗೆ ಮತ್ತು ಸಂಜೆ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಹಸಿವು ಮರುಕಳಿಸುತ್ತದೆ. ಜ್ವರದ ಲಕ್ಷಣಗಳು ಕಡಿಮೆಯಾಗುತ್ತದೆ.
ಸಾಸಿವೆ ಪುಡಿಯ ಪೇಸ್ಟ್ ಅನ್ನು ಉಳುಕಿದ ಜಾಗಕ್ಕೆ ಹಚ್ಚಿಕೊಂಡರೆ ನೋವು ಹಾಗೂ ಬಾವು ಬಹುಬೇಗ ಕಡಿಮೆಯಾಗುತ್ತದೆ. ಸಂಧಿವಾತದ ಸಮಸ್ಯೆ ಇರುವವರು ಸಾಸಿವೆ ಬೀಜವನ್ನು ಕರ್ಪೂರ ದೊಂದಿಗೆ ಜಜ್ಜಿ ನೋವಿರುವ ಜಾಗಕ್ಕೆ ಬ್ಯಾಂಡೇಜ್ ರೂಪದಲ್ಲಿ ಕಟ್ಟಿ. ಸಕ್ಕರೆಯೊಂದಿಗೆ ಬೆರೆಸಿದ ಸಾಸಿವೆ ಪುಡಿಯನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಇದನ್ನು ಬೆಳಿಗ್ಗೆ ಹಾಗೂ ಸಂಜೆ ವೇಳೆ ಸೇವಿಸಬಹುದು. ಇದರ ಸೇವನೆಯಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ




