ಬ್ರೆಡ್ ತೆಗೆದುಕೊಳ್ಳುವ ಮುನ್ನ…

ಪವಿತ್ರಾ ಶೆಟ್ಟಿ
ಹಲವು ವೈವಿಧ್ಯಗಳನ್ನು ತಯಾರಿಸಬಹುದಾದ ಬ್ರೆಡ್ ಅನ್ನು ಒಂದಿಲ್ಲೊಂದು ಕಾರಣಗಳಿಂದ ನೀವು ಖರೀದಿಸುತ್ತೀರಿ. ಹಿಂದೆ ರೋಗಿಗಳಿಗೆ ಮಾತ್ರ ಮೀಸಲಾಗಿದ್ದ ಬ್ರೆಡ್ ಇಂದು ಬಹು ಕಾರಣಗಳಿಗೆ ಬಳಕೆಯಾಗುತ್ತಿದೆ. ಆದರೆ ಬ್ರೆಡ್ ಕೊಳ್ಳುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಬ್ರೆಡ್ನ್ನು ನೀವು ಬೇಕರಿಗಳಲ್ಲಿ ಖರೀದಿಸಬೇಕು. ಖರೀದಿಗೂ ಮುನ್ನ ಬಳಸಬಹುದಾದ ಅಂತಿಮ ದಿನಾಂಕವನ್ನು ಕಡ್ಡಾಯವಾಗಿ ಗಮನಿಸಬೇಕು. ಮಳೆಗಾಲದಲ್ಲಿ ಬಹುಬೇಗ ಬೂಸ್ಟ್ ಹಿಡಿಯುವ ಬ್ರೆಡ್ಡನ್ನು ಹೆಚ್ಚು ದಿನ ಸಂಗ್ರಹಿಸಿಡುವುದು ಒಳ್ಳೆಯದಲ್ಲ. ತಂದ ಒಂದೆರಡು ದಿನದಲ್ಲಿ ಇದನ್ನು ಬಳಸಿ. ಒಮ್ಮೆ ಪ್ಯಾಕೆಟ್ ಒಡೆದ ಬಳಿಕ ಎರಡು ದಿನಕ್ಕಿಂತ ಹೆಚ್ಚು ಹೊರಗಡೆದಿರಿ. ಇದಕ್ಕೆ ಫಂಗಸ್ ತಗುಲುವ ಸಾಧ್ಯತೆ ಹೆಚ್ಚು.
ಇದರ ತಯಾರಿಕೆಗೆ ಹಿಟ್ಟು, ಯೀಸ್ಟ್, ನೀರು ಮತ್ತು ಉಪ್ಪನ್ನು ಬಳಸುತ್ತಾರೆ. ಇನ್ನು ಖರೀದಿ ವೇಳೆ ಅದರಲ್ಲಿ ಎಷ್ಟು ಪ್ರಮಾಣದ ಸೋಡಿಯಂ ಅನ್ನು ಬಳಸಲಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಅದೇ ರೀತಿ ಹಿಟ್ಟುಗಳ ಪೈಕಿ ಸಂಪೂರ್ಣವಾಗಿ ಗೋದಿಹಿಟ್ಟನ್ನು ಮಾತ್ರ ಬಳಸಿದ ಬ್ರೆಡ್ ಗಳಿಗೆ ಆದ್ಯತೆ ನೀಡಿ.
ಬ್ರೆಡ್ ಜೊತೆಗೆ ಹಸಿ ತರಕಾರಿ ಗಳನ್ನು ಸೇವಿಸಿ. ಅಂದರೆ ನೇರವಾಗಿ ಬ್ರೆಡ್ ರೋಸ್ಟ್ ಮಾಡಿ ತಿನ್ನುವ ಬದಲು ಬ್ರೆಡ್ ನಿಂದ ಸ್ಯಾಂಡ್ವಿಚ್ ತಯಾರಿಸಿ ತಿನ್ನಿ. ತರಕಾರಿಗಳಲ್ಲಿರುವ ಪೋಷಕಾಂಶಗಳು ಇದರಿಂದ ನಿಮ್ಮ ದೇಹವನ್ನು ಸೇರುತ್ತದೆ.




