ತನ್ನ ತಾಯಿಯೊಂದಿಗೆ ಅನೈತಿಕ ಸಂಬಂಧ ಶಂಕೆ : ಯುವಕನ ಕೊಲೆ ಮಾಡಿದ ಐವರು ಆರೋಪಿಗಳ ಬಂಧನ

ಕಲಬುರಗಿ: ಗಣರಾಜ್ಯೋತ್ಸವ ದಿನದಂದು ನಡೆದ ಪೊಟೋಗ್ರಾಫರ್ ಶಿವಕುಮಾರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧದ ಶಂಕೆಯಿಂದಲೇ ಕೊಲೆ ನಡೆದಿದೆ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕಳೆದ ವಾರ ಕಲಬುರಗಿ ಹೊರವಲಯದ ಸಾವಳಗಿ ರೈಲು ಹಳಿ ಮೇಲೆ ಯುವಕನ ಶವ ಪತ್ತೆಯಾಗಿತ್ತು. ಹಳಿ ಪಕ್ಕದ ರಸ್ತೆ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಬಳಿಕ ರೈಲು ಹಳಿಯ ಮೇಲೆ ಶವ ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಮೃತ ದೇಹದ ಮೇಲೆ ರೈಲು ಹರಿದ ಪರಿಣಾಮ ರುಂಡು ಮುಂಡ ತುಕ್ಕಡಿಯಾಗಿದ್ದವು. ಹೀಗಾಗಿ ಸಾವನ್ನಪ್ಪಿದ ವ್ಯಕ್ತಿ ಯಾರು ಅನ್ನೋದು ಪತ್ತೆ ಮಾಡುವುದು ವಾಡಿ ರೈಲ್ವೆ ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಶವದ ಕೈಮೇಲಿದ್ದ ತ್ರೀಶುಲಾಕಾರದ ಹಚ್ಚೆಯಿಂದ ಆತ ಯಾರು ಅನ್ನೋದು ಪೊಲೀಸರು ಪತ್ತೆ ಮಾಡಿದ್ದರು.
ಕೊಲೆಯಾದ ಯುವಕ ಪೊಟೋಗ್ರಾಫರ್ ಕೆಲಸ ಮಾಡಿಕೊಂಡಿದ್ದ ಶಿವಕುಮಾರ ಆಳಂದಕರ (28) ಅನ್ನೋದು ಪೊಲೀಸರು ಪತ್ತೆ ಮಾಡಿದ್ದರು. ಇದೀಗ ಆರೋಪಿಗಳನ್ನು ಕೂಡಾ ಪತ್ತೆ ಮಾಡಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಾಪುರ ತಾಲೂಕು ಶ್ರೀಚಂದ ಗ್ರಾಮದ ನಿವಾಸಿ ಮಹಾಂತೇಶ ಆಳಂದಕರ್ (21), ಶರಣಸಿರಸಗಿಯ ಬಸವರಾಜ ಸಲಗಾರ (24). ಫಕಿರಪ್ಪ ಸಲಗಾರ (25). ಸಿದ್ಧಾರೂಢ ಕೋರಬಾರ (26) ಮತ್ತು ಅಶೋಕ ಜಮಾದಾರ (26) ಗಳನ್ನು ಬಂಧಿತ ಆರೋಪಿಗಳು.
ತನ್ನ ತಾಯಿಯೊಂದಿಗೆ ಲವ್ವಿಡವ್ವಿ ಶಂಕೆಯಿಂದ ಕೊಲೆ:
ಕೊಲೆಯಾದ ಶಿವಕುಮಾರ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದ ನಿವಾಸಿ, ಕೊಲೆ ಮಾಡಿದ ಪ್ರಮುಖ ಆರೋಪಿ ಮಹಾಂತೇಶ ಕೂಡ ಇದೆ ಗ್ರಾಮದ ನಿವಾಸಿ. ಮಹಾಂತೇಶನ ತಾಯಿಯೊಂದಿಗೆ ಶಿವುಕುಮಾರ ಅನೈತಿಕ ಸಂಬಂಧ ಹೊಂದಿದ್ದನಂತೆ, 28 ವರ್ಷದ ಯುವಕ ತನ್ನ ತಾಯಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಬಗ್ಗೆ ತಿಳಿದು ಅಸಮಾಧಾನಪಟ್ಟು ಕೊನೆಗೆ ಶಿವಕುಮಾರನನ್ನು ಮುಗಿಸಲು ಮಹಾಂತೇಶ ನಿರ್ಧರಿಸಿದ್ದ, ತನ್ನ ಸೋದರ ಮಾವ ಹಾಗೂ ಇನ್ನಿತರ ಮೂರು ಜನ ಪರಿಚಯಿಸ್ತ ಯುವಕರ ಸಹಾಯದಿಂದ ಶಿವಕುಮಾರನ ಕುತ್ತಿಗೆಗೆ ಹರಿತವಾದ ಆಯುಧದಿಂದ ಚುಚ್ಚಿ ನಂತರ ಶವವನ್ನು ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ರೈಲು ಹಳಿಯ ಮೇಲೆ ಇಟ್ಟು ಪರಾರಿಯಾಗಿದ್ದರೆಂದು ಪೋಲಿಸರ ತನಿಖೆಯಿಂದ ತಿಳಿದುಬಂದಿದೆ.
ಕಳೆದ ಮೂರು ತಿಂಗಳಿಂದ ಕೊಲೆಗೆ ಹೊಂಚು ಹಾಕಿ, ಕೊನೆಗೆ ಜ.26 ರಂದು ಶ್ರೀಚಂದ ಗ್ರಾಮದಿಂದ ಶಿವಕುಮಾರನನ್ನು ಕರೆತಂದು ಸಾವಳಗಿ ಬಳಿ ಕೊಲೆ ಮಾಡಿ ಪರಾರಿಯಾಗಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ವಾಡಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಕಲಂ 302. 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
