Latestಅಂಕಣಗಳು

ಚುನಾವಣೆ ಹೊತ್ತಲ್ಲಿ ಹೊರಬಿದ್ದ ಶೈಕ್ಷಣಿಕ ಮೀಸಲಾತಿ ನಿರ್ಧಾರ ‘ಐತಿಹಾಸಿಕ’ವೇ?

ಜಿ.ಮುಮ್ತಾಜ್ ಅಲೀಮ್

ಭಾರತೀಯ ಜನತಾ ಪಕ್ಷ ಮೇಲ್ಜಾತಿಯ ಅದರಲ್ಲೂ ಸಂಪ್ರದಾಯವಾದಿ ಬ್ರಾಹ್ಮಣರು ಮತ್ತು ಬನಿಯಾಗಳ ಪಕ್ಷ ಎಂದು ಕುಖ್ಯಾತಿಗೀಡಾಗಿರುವುದು ಜನಜನಿತ. ಆದರೆ ಎಲ್ಲರಿಗೂ ಚಕಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ಹಾಗೂ ಬಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಗುರುವಾರ ದಿಢೀರಾಗಿ ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದ್ದಾರೆ.

ಹಳೆಯ ವಿವಾದ, ಸಂಘರ್ಷ ಅಥವಾ ಬಹುಕಾಲದ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಇದೊಂದು ಐತಿಹಾಸಿಕ ತೀರ್ಮಾನ ಎಂದೂ ಬಣ್ಣಿಸಲಾಗುತ್ತಿದೆ. ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಸ್ಎಂಎಸ್, ಬಿಯುಎಂಎಸ್, ಬಿಹೆಚ್ಎಂಎಸ್, ಎಂಡಿಯಿಂದ ಹಿಡಿದು ಮೆಡಿಕಲ್ ಡಿಪ್ಲೋಮೋವರೆಗಿನ ಪದವಿಪೂರ್ವ ವೈದ್ಯ ಶಿಕ್ಷಣದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ (ಓಬಿಸಿ) ಶೇ.27ರಷ್ಟು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ(ಇಡಬ್ಲ್ಯುಎಸ್) ವಿದ್ಯಾರ್ಥಿಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ನಿರ್ಧಾರ ಘೋಷಣೆಯಾಗಿದೆ.

ಕಳೆದ ಆರು ವರ್ಷಗಳಿಂದ ಈ ಸೀಟುಗಳು ಖಾಲಿಬಿದ್ದಿದ್ದವು. ಇದರಿಂದಾಗಿ ಸರಿಸುಮಾರು 12 ಸಾವಿರ ವಿದ್ಯಾರ್ಥಿಗಳು ಮೀಸಲಾತಿಯಿಂದ ವಂಚಿತರಾದರು. ಅವುಗಳನ್ನು ಭರ್ತಿ ಮಾಡುವ ಯಾವ ಪ್ರಯತ್ನವೂ ನಡೆದಿರಲಿಲ್ಲ. ಹೀಗಾಗಿ ಇದು ವಿವಾದಕ್ಕೆಡೆ ಮಾಡಿಕೊಟ್ಟಿತ್ತು. ಖಾಲಿ ಇರುವ ಈ ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡಬೇಕೆಂಬುದು ಬಹುದಿನಗಳ ಹಕ್ಕೊತ್ತಾಯವಾಗಿತ್ತು. ಈವರೆಗೆ ಈ ಸೀಟುಗಳು ಹಿಂದುಳಿದ ಅಥವಾ ಬಡ ವಿದ್ಯಾರ್ಥಿಗಳ ಬದಲಾಗಿ ಜನರಲ್ ಕ್ಯಾಟಗರಿಯಲ್ಲಿ ಹಂಚಿಕೆಯಾಗುತ್ತಿದ್ದವು.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ದೇಶದ ಜನರ ಮುಂದಿಟ್ಟರು. ವ್ಯಾಪಕ ಪ್ರಚಾರ ಮತ್ತು ಮಹತ್ವ ಇದರ ಹಿಂದಿನ ಉದ್ದೇಶವಾಗಿರಬಹುದು. ಕೇಂದ್ರ ಸರ್ಕಾರದ ಈ ತೀರ್ಮಾನ ಸರಿಯೋ, ತಪ್ಪೋ ಎನ್ನುವುದಕ್ಕಿಂತ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಸಮಯದಲ್ಲಿ ಕೈಗೊಂಡ ನಿರ್ಧಾರವಿದು ಎಂದೆನ್ನಬಹುದು. ಇದರಿಂದಾಗಿ ಪ್ರತಿ ವರ್ಷ ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನ ದಕ್ಕಲಿದೆ ಎಂದು ಅಂದಾಜಿಸಲಾಗಿದೆ.

ಗೇಮ್ ಚೇಂಜರ್ ಪ್ಲಾನ್
ಒತ್ತಡಕ್ಕೆ ಸಿಲುಕಿರುವುದರ ದ್ಯೋತಕವಾಗಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆಯೇ ಎಂಬುದು ಪ್ರಶ್ನೆ. ಅಥವಾ ಮೋದಿ ಸರ್ಕಾರದ ಗೇಮ್ ಚೆಂಜರ್ ಪ್ಲಾನ್ ಗೆ ಅನುಗುಣವಾಗಿ ದಿಢೀರೆಂದು ಈ ನಿರ್ಧಾರ ಹೊರಬಿದ್ದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ವಿ.ಪಿ.ಸಿಂಗ್ ಅವರು ಅಹಿಂದ ಜನರ ಮತ ಸೆಳೆಯಲು ಮಂಡಲ್ ಕಾರ್ಡ್ ಬಳಸಿದರು. ಇದೇ ಸೂತ್ರಕ್ಕೆ ಅನುಗುಣವಾಗಿ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಮತ್ತಿತರ ರಾಜ್ಯಗಳೂ ಸೇರಿದಂತೆ ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈಗ ಮಂಡಲ್ 2.0 ಜಾರಿಗೊಳಿಸಲಾಗಿದೆ ಎಂದೆನ್ನಲಾಗುತ್ತಿದೆ.

ಪ್ರಮುಖವಾಗಿ ಸನಿಹದಲ್ಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ತೀರ್ಮಾನ ಹೊರಬಿದ್ದಿದೆ. ಏಕೆಂದರೆ 2017ರ ಯುಪಿ ಚುನಾವಣೆಯಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಅಮೋಘ ಬೆಂಬಲದ ಹಿನ್ನೆಲೆಯಲ್ಲಿ ಯುಪಿಯಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿತ್ತು. ಆದರೆ ಅದನ್ನು ಕಾಯ್ದುಕೊಳ್ಳುವಲ್ಲಿ ಯೋಗಿ ಸರ್ಕಾರ ವಿಫಲವಾಗಿದೆ. ಈ ಮುಂಚೆಗೆ ಹೋಲಿಸಿದರೆ ಸರ್ಕಾರದ ಜನಪ್ರಿಯತೆ ಈಗ ಕುಸಿದಿದೆ.ಮುಂಬರುವ ಚುನಾವಣೆಯಲ್ಲಿ ಯುಪಿಯಂತಹ ದೊಡ್ಡ ರಾಜ್ಯದಲ್ಲಿ ಸೋಲುವ ಭೀತಿ ಅದನ್ನು ಕಾಡುತ್ತಿದೆ ಎಂಬ ಮಾತುಗಳಿವೆ.


ಡ್ಯಾಮೇಜ್ ಕಂಟ್ರೋಲ್?
ಡ್ಯಾಮೇಜ್ ಕಂಟ್ರೂಲ್ ಮಾಡುವ ನಿಟ್ಟಿನಲ್ಲಿಯೂ ಇದನ್ನು ನೋಡಲಾಗುತ್ತಿದೆ. 2014, 2017ರ ಯುಪಿ ಚುನಾವಣೆಗಳಲ್ಲಿ ಬಿಜೆಪಿ ಯಾದವ ಏತರ ಹಿಂದುಳಿದ ವರ್ಗಗಳ ಮುಖಂಡರನ್ನು ಮತ್ತು ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ನಿಟ್ಟಿನಲ್ಲಿ ಕೇಶವ್ ಪ್ರಸಾದ್ ಮೌರ್ಯರಂತಹ ಹಿಂದುಳಿದ ವರ್ಗದ ಧುರೀಣನನ್ನು ಉತ್ತರ ಪ್ರದೇಶದಲ್ಲಿ ಕೇಸರಿ ಪಕ್ಷದ ಸಾರಥಿಯನ್ನಾಗಿಸಲಾಗಿತ್ತು. ಆದರೆ ತದನಂತರದಲ್ಲಿ ಅಲ್ಲಿ ನಡೆದಿದ್ದೇ ಬೇರೆ. ನೀಡಿದ ಭರವಸೆ ಮಣ್ಣುಗೂಡಿ ಕೇಶವ ಪ್ರಸಾದ್ ಮೌರ್ಯ ಬದಲು ಮುಖ್ಯಮಂತ್ರಿ ಸ್ಥಾನದಲ್ಲಿ ರಜಪೂತ ಸಮುದಾಯದ ಯೋಗಿ ಆದಿತ್ಯನಾಥರನ್ನು ಕೂರಿಸಲಾಯಿತು. ಈ ವಿಷಯದಲ್ಲಿ ಈ ಇಬ್ಬರೂ ನಾಯಕರ ನಡುವೆ ಅಂದಿನಿಂದ ಇಂದಿನವರೆಗೆ ಒಂದು ರೀತಿಯಲ್ಲಿ ಪರೋಕ್ಷ ರಾಜಕೀಯ ಸಂಘರ್ಷದ ವಾತಾವರಣ ಏರ್ಪಟ್ಟಿತು. ಪ್ರಸ್ತುತ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಬಿಜೆಪಿ ಹಿಂದೇಟು ಹಾಕುವಂತಹ ವಾತಾವರಣ ಏರ್ಪಟ್ಟಿದೆ.


ಹಿಂದುಳಿದವರ ಜತೆ ಮೇಲ್ಜಾತಿಯವರನ್ನೂ ತಣಿಸುವ ಯತ್ನ
ಆರ್ಥಿಕವಾಗಿ ದುರ್ಬಲರಾದ ವರ್ಗದ ವಿದ್ಯಾರ್ಥಿಗಳಿಗೂ ಶೇ.10ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಉತ್ತರ ಪ್ರದೇಶಕ್ಕೆ ಸೀಮಿತವಾಗಿ ಹೇಳುವುದಾದರೆ, ರಾಜ್ಯದಲ್ಲಿ ಮೇಲ್ಜಾತಿಯ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯ ಸಮುದಾಯದ ಬಹುಪಾಲು ಮತಗಳನ್ನು ಬಿಜೆಪಿ ಸಾಂಪ್ರದಾಯಿಕವಾಗಿ ದಕ್ಕಿಸಿಕೊಳ್ಳುತ್ತಾ ಬಂದಿದೆ. ಆದರೆ ಮೇಲ್ಜಾತಿಯ ಜನರಲ್ಲಿ ಮೀಸಲಾತಿ ವಿರೋಧಿಸುವ ದೊಡ್ಡದೊಂದು ಪಂಗಡ ಅಥವಾ ಗುಂಪಿರುವುದನ್ನು ತಳ್ಳಿಹಾಕುವಂತಿಲ್ಲ.

ಈ ಹಿಂದೆ ದಿವಂಗತ ವಿ.ಪಿ.ಸಿಂಗ್ ಅವರು ಮಂಡಲ್ ಆಯೋಗದ ವರದಿಗೆ ಅನುಗುಣವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲು ಮುಂದಾದಾಗ ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುವ ಸಮರ್ಥಕರಿಂದ ಅತಿದೊಡ್ಡ ವಿರೋಧ ವ್ಯಕ್ತವಾಗಿತ್ತು. ಸರಿಸುಮಾರು ಮಂಡಲ್ ಕಾಂಡದ ವೇಳೆಯಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯವಾಗಿ ಬಿಜೆಪಿ ಧುರೀಣ ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದಲ್ಲಿ ದೇಶಾದ್ಯಂತ ‘ಕಮಂಡಲ್ ರಥಯಾತ್ರೆ’ ನಡೆದ ಪರಿಣಾಮವಾಗಿ ವಿ.ಪಿ.ಸಿಂಗ್ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಅಂದರೆ ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುವ ಕಟ್ಟರ್ ಪಂಥ ಏನಿದೆಯೋ, ಕೇಸರಿ ಪಕ್ಷದ ಆಡಳಿತವನ್ನು ಹಿಂದುತ್ವದ ಅಥವಾ ಹಿಂದೂ ರಾಷ್ಟ್ರ ಪರಿಕಲ್ಪನೆಯ ಮೂಸೆಯಲ್ಲಿ ನೋಡುತ್ತದೆಯೋ ಅವರನ್ನೂ ತಣಿಸುವ ಪ್ರಯತ್ನವೂ ಇದರ ಹಿಂದಿದೆ. ಅಂದರೆ ಇತರೆ ಹಿಂದುಳಿದ ವರ್ಗಗಳಿಗೆ ಮಾತ್ರ ಅಲ್ಲ ನಿಮಗೂ ಮೀಸಲಾತಿ ಅವಕಾಶ ಕಲ್ಪಿಸಿದ್ದೇವೆ ಎಂಬ ಸಂದೇಶ ಇದರ ಹಿಂದಿದೆ. ಈ ಮೂಲಕ ಓಬಿಸಿ ಮತಗಳನ್ನು ಕಟ್ಟಿಹಾಕುವ ಪ್ರಯತ್ನದ ಭಾಗವೂ ಕೇಂದ್ರದ ಈ ಮಹತ್ವದ ನಿರ್ಧಾರದ ಹಿಂದಿದೆ ಎನ್ನಲಾಗುತ್ತಿದೆ.

ಯುಪಿ ಚುನಾವಣೆಯಲ್ಲಿ ಸಂಭವನೀಯ ನಷ್ಟವನ್ನು ಭರ್ತಿ ಮಾಡುವ ನಿಟ್ಟಿನಲ್ಲಿಯೂ ಕೇಂದ್ರ ಮೀಸಲಾತಿಯ ಈ ಹೆಜ್ಜೆಯನ್ನಿರಿಸಿದೆ ಎಂದೂ ಹೇಳಲಾಗುತ್ತಿದೆ. ವಾಸ್ತವವಾಗಿ ದಲಿತ ಮತ್ತು ಹಿಂದುಳಿದ ವರ್ಗದ ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ತಾಣಗಳ ಮೂಲಕ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಮೀಸಲಾತಿ ವಿಷಯಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ದೊರಕಿಸುವಲ್ಲಿ ಸಫಲರಾದರು. ರಾಜಕೀಯವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಒತ್ತಡ ಹೇರಿದರು. ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟ ಡಿಎಂಕೆ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ದೊಡ್ಡಮಟ್ಟದ ದನಿ ಎತ್ತಿ, ಸದನದಲ್ಲೇ ಪ್ರತಿಭಟಿಸುವ ಮೂಲಕ ಒತ್ತಡ ತಂತ್ರ ಅನುಸರಿಸಿದರು. ಆದರೆ ಆರಂಭದಲ್ಲಿ ಈ ಆಂದೋಲನವನ್ನು ಡೈಲ್ಯೂಟ್ ಮಾಡುವ ಪ್ರಯತ್ನಗಳು ನಡೆದವು.

ಮಂಡಲ್ ಆದ್ಮಿ ಸಂಘಟನೆಯ ಅನುರೂಪ್ ಸಿಂಗ್ ಯಾದವ್ ರಂತಹವರು ಈ ಸಂಬಂಧ ಪ್ರತಿಭಟನೆ ಹಮ್ಮಿಕೊಂಡು ಸುಪ್ರೀಂಕೋರ್ಟ್ ಗೆ ಹೋಗುವ ಮಾತನ್ನಾಡಿದ್ದರು. ಈ ಸಂದರ್ಭದಲ್ಲಿ ಯೋಗಿ ಸರ್ಕಾರ ಅವರನ್ನು ಬಂಧಿಸಿತ್ತು. ಇದಾದ ಮೇಲೆ ಈ ಹೋರಾಟ ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳಿಂದ ತೀವ್ರಗೊಂಡು ಆಂದೋಲನದ ರೂಪ ಪಡೆಯಲಾರಂಬಿಸಿತ್ತು. ಮುಂದೆರಗಲಿರುವ ಅಪಾಯದ ಮುನ್ಸೂಚನೆಯ ಎಚ್ಚರಿಕೆಯನ್ನು ಬಿಜೆಪಿ ಮನಗಂಡಿತ್ತು. ಯುಪಿಯಲ್ಲಿ ಶೇ.40ರಿಂದ 42ರಷ್ಟಿರುವ ಹಿಂದುಳಿದ ವರ್ಗಗಳ ಜನಸಂಖ್ಯೆ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿತ್ತು.

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ ಸಂಭವನೀಯ ಅಪಾಯದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಿಮವಾಗಿ ವೈದ್ಯ ಶಿಕ್ಷಣದಲ್ಲಿ ಓಬಿಸಿ ಮತ್ತು ದುರ್ಬಲ ವರ್ಗದವರಿಗೆ ಮೀಸಲಾತಿ ಘೋಷಣೆಯ ನಿರ್ಧಾರ ಪ್ರಕಟಿಸುವುದು ಅನಿವಾರ್ಯವಾಯಿತು. ಸ್ವತಃ ಪ್ರಧಾನಿಯೇ ಘೋಷಿಸಿದ ಮೇಲೆ ಆಡಳಿತ ಯಂತ್ರಾಂಗ ಅದಕ್ಕೆ ಅತಿರಂಜಿತ ಪ್ರಚಾರ ಮತ್ತು ಪ್ರಾಮುಖ್ಯತೆ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಮೀಸಲಾತಿ ಘೋಷಣೆ ದಾಕ್ಷಿಣ್ಯವಲ್ಲ
ಒಟ್ಟಾರೆ, ಗಮನಿಸಬೇಕಾದ್ದು ಏನೆಂದರೆ ಇದೇನು ಓಬಿಸಿ ಹಾಗೂ ಇಡಬ್ಲುಎಸ್ ವೈದ್ಯ ವಿದ್ಯಾರ್ಥಿಗಳ ಮೇಲೆ ಪ್ರಧಾನಿ ಮೋದಿ ಅಥವಾ ಅವರ ಕೇಸರಿಪಕ್ಷದ ನೇತೃತ್ವದ ಸರ್ಕಾರ ತೋರಿರುವ ಸಹಾನುಭೂತಿ ಅಥವಾ ದಾಕ್ಷಿಣ್ಯವಲ್ಲ. ಅಹಿಂದ ಜನವರ್ಗ ಸುದೀರ್ಘ ಹೋರಾಟ ನಡೆಸಿದ ತರುವಾಯವೇ ತಮ್ಮ ಹಕ್ಕು, ಅಧಿಕಾರಗಳನ್ನು ಪಡೆಯಲು ಸಾಧ್ಯ ಎಂಬುದು ಇತಿಹಾಸದಿಂದ ರುಜುವಾತಾಗಿದೆ. 2015ರಿಂದ ಕಣ್ಮುಚ್ಚಿ ಕುಳಿತಿದ್ದ ಸರ್ಕಾರಕ್ಕೆ ದಿಢೀರ್ ಜ್ಞಾನೋದಯವಾಗುವುದರ ಹಿಂದೆ ಉತ್ತರ ಪ್ರದೇಶದ ಚುನಾವಣೆ ರಣನೀತಿ ಅಥವಾ ರಣತಂತ್ರ ಕೆಲಸ ಮಾಡಿದೆ. ಜತೆಗೆ ಕೇಸರಿ ಪಕ್ಷದ ವಿರುದ್ಧ ಮಡುಗಟ್ಟುತ್ತಿರುವ ಸಂಭವನೀಯ ಹೋರಾಟದ ಕಹಳೆ ಮತ್ತು ಒತ್ತಡವೇ ಕಾರಣ ಎಂದೆನ್ನಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button