
ಬೆಂಗಳೂರು: ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿರುವ ನಾಲ್ವರು ಸರ್ಪ್ರೈಸಿಂಗ್ ಆಯ್ಕೆಯಾಗಿದ್ದು, ಈ ಮೂಲಕ ಬಿಜೆಪಿ ವರಿಷ್ಠರು ನಿಸ್ಸಂದೇಹವಾಗಿಯೂ ಯಡಿಯೂರಪ್ಪ ಅವರಿಗೆ ಶಾಕ್ ಕೊಟ್ಟಿದ್ದಾರೆ.
ಬಿವೈ ರಾಘವೇಂದ್ರ ಸೇರಿದಂತೆ ಬೇರೆಯೇ ಹೆಸರುಗಳು ನಿನ್ನೆಯವರೆಗೂ ಕೇಳಿಬರುತ್ತಿದ್ದುದು ಗೊತ್ತೇ ಇದೆ. ಶೋಭಾ ಕರಂದ್ಲಾಜೆಯವರಿಗೆ ಕೇಂದ್ರ ಮಂತ್ರಿ ಸ್ಥಾನ ಸಿಗಲಿರುವುದರ ಬಗ್ಗೆ ಊಹೆಯನ್ನೂ ಯಾರೂ ಮಾಡಿರಲಿಲ್ಲ. ನಿನ್ನೆ ನಾರಾಯಣಸ್ವಾಮಿ ಸೇರ್ಪಡೆ ಬಗ್ಗೆ ಸ್ವಲ್ಪ ಮಟ್ಟಿಗೆ ಖಚಿತವಾಗಿತ್ತು, ಅಷ್ಟೆ. ಭಗವಂತ ಖೂಬಾ ಅವರ ಹೆಸರಂತೂ ಬಹಿರಂಗಗೊಂಡದ್ದೇ ಇವತ್ತು. ಹಾಗೆಯೇ ರಾಜೀವ್ ಚಂದ್ರಶೇಖರ್ ಹೆಸರು ಕೂಡ.
ಇನ್ನೊಂದು ಮುಖ್ಯ ವಿಚಾರವೆಂದರೆ, ನಾರಾಯಣಸ್ವಾಮಿಯಾಗಲೀ ಭಗವಂತ ಖೂಬಾ ಆಗಲೀ ಯಡಿಯೂರಪ್ಪ ಆಪ್ತ ವಲಯದವರಂತೂ ಅಲ್ಲ. ರಾಜೀವ್ ಚಂದ್ರಶೇಖರ್ ಆಯ್ಕೆ ಬೇರೆಯೇ ಲೆಕ್ಕಾಚಾರದ್ದು. ಶೋಭಾ ಕರಂದ್ಲಾಜೆ ಅವರು ಯಡಿಯೂರಪ್ಪನವರ ಕುಟುಂಬದಿಂದ ದೂರವಾಗಿ ಅಥವಾ ಅವರನ್ನು ಯಡಿಯೂರಪ್ಪ ಕುಟುಂಬ ದೂರವಿಟ್ಟು ಬಹಳ ಕಾಲವೇ ಆಗಿಹೋಗಿದೆ.
ಸತ್ಯವೇನೆಂದರೆ, ಶೋಭಾ ಕರಂದ್ಲಾಜೆ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದನ್ನು ಅರಗಿಸಿಕೊಳ್ಳುವುದಕ್ಕೇ ಬಿಎಸ್ವೈ ಕುಟುಂಬಕ್ಕೆ ಬಹಳ ಕಾಲ ಬೇಕಾಗಬಹುದು. ಶೋಭಾ ಕೇಂದ್ರ ಮಂತ್ರಿಯಾಗುತ್ತಿರುವುದು ಬಿವೈ ವಿಜಯೇಂದ್ರ ಸೇರಿದಂತೆ ಯಾರಿಗೂ ಸಹಿಸಿಕೊಳ್ಳಲು ಆಗದ ವಿಚಾರ ಎಂಬುದು ರಹಸ್ಯವೇನಲ್ಲ.
ಕೆಲವು ದಿನಗಳ ಹಿಂದೆ ಒಂದು ವಿಚಾರ ಚರ್ಚೆಯಲ್ಲಿತ್ತು. ಅದರ ಪ್ರಕಾರ, ಬಿವೈ ರಾಘವೇಂದ್ರ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆ ಮೂಲಕ, ಯಡಿಯೂರಪ್ಪನವರ ಗೌರವಪೂರ್ವಕ ನಿರ್ಗಮನಕ್ಕೆ ರಾಜ್ಯ ಬಿಜೆಪಿಯಲ್ಲಿ ವೇದಿಕೆ ಸಜ್ಜಾಗಲಿದೆ ಎಂಬ ವಿಚಾರ ಮುನ್ನೆಲೆಯಲ್ಲಿತ್ತು. ಆದರೆ, ಅದಾದ ಬಳಿಕ ಯಡಿಯೂರಪ್ಪನವರು, ರಾಜ್ಯ ಪ್ರವಾಸ ಮಾಡುವ ಹೇಳಿಕೆ ಕೊಟ್ಟಿದ್ದರು. ಯಾವುದೋ ವಿಚಾರದ ಚರ್ಚೆಯ ನೆಪದಲ್ಲಿ ಎಚ್ಡಿಕೆ ಮತ್ತು ಬಿಎಸ್ವೈ ಭೇಟಿ ಆಗಿದ್ದು ಕೂಡ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ನಡುವೆಯೇ ಗಣಿ ಸಚಿವ ಮುರುಗೇಶ್ ನಿರಾಣಿ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದರು.
ಯಡಿಯೂರಪ್ಪನವರನ್ನು ಗೌರವಪೂರ್ವಕವಾಗಿ ಕಳಿಸಿಕೊಟ್ಟು ಹೊಸ ನಾಯಕನ ಆಯ್ಕೆಗೆ ದಾರಿ ಸುಗಮಗೊಳಿಸುವ ವರಿಷ್ಠರ ಆಲೋಚನೆಗೆ ಸ್ವತಃ ಯಡಿಯೂರಪ್ಪನವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲವೇನೋ ಎಂಬ ಅನುಮಾನವೂ ತಲೆದೋರುವ ಹಾಗೆ ಇದೆಲ್ಲ ಬೆಳವಣಿಗೆಗಳು ಕಂಡಿದ್ದವು.
ಇದರ ಮುಂದುವರಿಕೆಯಾಗಿಯೇ, ಇದೀಗ ಕೇಂದ್ರ ಸಂಪುಟಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ನಾಲ್ವರ ಹಿನ್ನೆಲೆ, ಅದರಲ್ಲೂ ಮುಖ್ಯವಾಗಿ ಅವರು ಯಡಿಯೂರಪ್ಪ ಆಪ್ತವಲಯದವರಲ್ಲ ಎಂಬ ವಿಚಾರವನ್ನು ವಿಶೇಷವಾಗಿ ಗಮನಿಸಬೇಕಾಗುತ್ತದೆ. ನೀವು ನಮ್ಮ ಮಾತಿಗೆ ಮಣಿಯದಿದ್ದರೆ ಏನು ಮಾಡಬೇಕೆಂಬುದು ನಮಗೂ ಗೊತ್ತಿದೆ ಎಂಬ ಖಡಕ್ ಸಂದೇಶವನ್ನೇ ಈ ನಾಲ್ವರ ಆಯ್ಕೆ ಮೂಲಕ ಬಿಜೆಪಿ ವರಿಷ್ಠರು ಯಡಿಯೂರಪ್ಪನವರಿಗೆ ನೀಡಿದರೇ ಎಂಬ ಪ್ರಶ್ನೆಯೆದ್ದಿದೆ.
ಇದು ಹೌದೆಂದೇ ಆಗಿದ್ದಲ್ಲಿ, ಬಿಎಸ್ವೈ ಮತ್ತು ಬಿಜೆಪಿ ವರಿಷ್ಠರ ಧಾಟಿ ಮತ್ತು ದಾರಿ ಪರಸ್ಪರ ಬೇರೆಯಾದರೂ ಅಚ್ಚರಿಯಿಲ್ಲ. ಸದ್ಯಕ್ಕಂತೂ, ರಾಜ್ಯದಿಂದ ನಾಲ್ವರನ್ನು ಕೇಂದ್ರ ಸಂಪುಟಕ್ಕೆ ಆರಿಸಿಕೊಳ್ಳುವಾಗ ಯಡಿಯೂರಪ್ಪನವರನ್ನು ಸ್ಪಷ್ಟವಾಗಿ ಹೈಕಮಾಂಡ್ ಕಡೆಗಣಿಸಿದೆ ಎಂದೇ ಹೇಳಬೇಕು.



