ಕೇಂದ್ರ ಸಂಪುಟಕ್ಕೆ ಶೋಭಾ, ಖೂಬಾ, ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್; ಒಬಿಸಿ, ಎಸ್ಸಿ-ಎಸ್ಟಿಗೆ ಹೆಚ್ಚಿನ ಪ್ರಾತಿನಿಧ್ಯ

ನವದೆಹಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ರಾಜ್ಯದಿಂದ ಹೊಸದಾಗಿ ನಾಲ್ವರಿಗೆ ಅವಕಾಶ ಕೊಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಇದರೊಂದಿಗೆ ಕರ್ನಾಟಕಕ್ಕೆ ಒಟ್ಟು 6 ಸಚಿವ ಸ್ಥಾನ ದೊರೆತಂತಾಗಿದೆ. ಪ್ರಹ್ಲಾದ್ ಜೋಷಿ, ನಿರ್ಮಲಾ ಸೀತಾರಾಮನ್ ಈಗಾಗಲೇ ರಾಜ್ಯ ಕೋಟಾದಿಂದ ಸಂಪುಟದಲ್ಲಿದ್ದಾರೆ.
ಸಚಿವ ಸ್ಥಾನದಿಂದ ಕೈಬಿಡಲಾದವರ ಪಟ್ಟಿಯಲ್ಲಿ ರಾಜ್ಯದ ಕಡೆಯಿಂದ ಸದಾನಂದಗೌಡ ಇದ್ದಾರೆ. ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವ್ಡೇಕರ್, ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡ ತಾವರ್ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ಹರ್ಷವರ್ಧನ್, ಬಬುಲ್ ಸುಪ್ರಿಯೊ, ರಮೇಶ್ ಪೋಖ್ರಿಯಾಲ್, ಸಂತೋಷ್ ಗಂಗ್ವಾರ್ ಸಂಪುಟದಿಂದ ಕೈಬಿಡಲಾಗಿರುವ 12 ಸಚಿವರ ಪಟ್ಟಿಯಲ್ಲಿರುವ ಇತರ ಪ್ರಮುಖರು.
53 ಸಚಿವರಿದ್ದ ಸಂಪುಟದಿಂದ 12 ಸಚಿವರನ್ನು ಕೈಬಿಟ್ಟು, ಹೊಸದಾಗಿ ಇಂದು 36 ಸಚಿವರ ಸೇರ್ಪಡೆ ಮಾಡಲಾಗಿದೆ. ಹಲವಾರು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. 50ರೊಳಗಿನರೇ ಹೆಚ್ಚಿನವರು ಇದ್ದಾರೆ. ವಿವಿಧ ವೃತ್ತಿಪರರು ಸಂಪುಟದೊಳಕ್ಕೆ ಬಂದಿರುವುದು ಗಮನೀಯ. ಸಂಪುಟದಲ್ಲಿದ್ದ 7 ಮಂತ್ರಿಗಳಿಗೆ ಸಂಪುಟ ದರ್ಜೆ ಮತ್ತು ಸ್ವತಂತ್ರ ಖಾತೆ ಸಚಿವರಾಗಿ ಬಡ್ತಿ ನೀಡಲಾಗಿದೆ. ಕಿರಣ್ ಜಿಜಿಜು, ರಾಜ್ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪೂರಿ, ಮಾನುಷ್ಪಕ್ರ್ಶೋ ಮಾಂಡವೀಯ, ಪರ್ಶೋತ್ತಮ್ ರುಪಾಲಾ, ಕಿಶನ್ ರೆಡ್ಡಿ, ಅನುರಾಗ್ ಠಾಕೂರ್ ಬಡ್ತಿ ಪಡೆದ ಸಚಿವರುಗಳು.
ಸಂಪುಟ ವಿಸ್ತರಣೆ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ. ವಿಧಾನಸಭೆ ನಡೆಯಲಿರುವ ರಾಜ್ಯಗಳನ್ನು ಸಚಿವ ಸ್ಥಾನ ನೀಡುವ ವೇಳೆ ಗಮನದಲ್ಲಿ ಇರಿಸಿಕೊಳ್ಳಲಾಗಿದೆ.
ಮೊದಲ ಬಾರಿಗೆ ಸಂಪುಟದಲ್ಲಿ ಹಿಂದುಳಿದ ವರ್ಗಕ್ಕೆ ಬಹುದೊಡ್ಡ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಹೊಸಬರಲ್ಲಿ 25 ಮಂದಿ ಹಿಂದುಳಿದ ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ಹಾಗೆಯೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೂ ಹೆಚ್ಚಿನ ಪ್ರಾತಿನಿಧ್ಯ ಲಭ್ಯವಾಗಿದೆ. ಐವರು ಅಲ್ಪಸಂಖ್ಯಾತ ಸಮುದಾಯದವರಿಗೂ ಅವಕಾಶ ಕೊಡಲಾಗಿದೆ.
11 ಮಹಿಳೆಯರಿಗೆ ಸಂಪುಟದಲ್ಲಿ ಅವಕಾಶ ದೊರೆತಿದ್ದು, ಅವರಲ್ಲಿ ಇಬ್ಬರಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗಿದೆ.
