
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ, ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಮತ್ತೆ ಗೃಹಬಂಧನಕ್ಕೆ ಒಳಗಾಗಿದ್ದಾರೆ. ಪುಲ್ವಾಮ ಜಿಲ್ಲೆಗೆ ಭೇಟಿ ನೀಡಲು ಮುಂದಾದಾಗ ತನ್ನನ್ನು ಗೃಹಬಂಧನಗೊಳಿಸಿದ್ದಾರೆ ಎಂದು ಸ್ವತಃ ಟ್ವೀಟ್ ಮಾಡಿದ್ದಾರೆ.
ಸೇನಾ ಸಿಬ್ಬಂದಿಗಳು ಜನರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ. ಗ್ರಾಮವೊಂದರ ಮನೆಗಳಿಗೆ ಟ್ರಾಲ್ ಪಟ್ಟಣದ ಯಾಗವಾಣಿ ಶಿಬಿರದ ಸೇನಾ ಸಿಬ್ಬಂದಿಗಳು ದಾಳಿ ನಡೆಸಿ, ಕೆಲವರನ್ನು ಥಳಿಸಿದ್ದಾರೆ. ಮಹಿಳೆಯೊಬ್ಬರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದೌರ್ಜನ್ಯಕ್ಕೀಡಾದ ಟ್ರಾಲ್ ಗ್ರಾಮಕ್ಕೆ ಭೇಟಿ ನೀಡಲು ಮುಂದಾದಾಗ ನನ್ನನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ. ಇದು ಕಾಶ್ಮೀರದ ವಾಸ್ತವ ಸಂಗತಿಯಾಗಿದೆ ಎಂದು ಮೆಹಬೂಬ ಮುಫ್ತಿ ಟ್ವೀಟ್ ಮಾಡಿದ್ದಾರೆ.



