
ಪಾಲಕ್ಕಾಡ್: ಕೇರಳದ ಮಲಂಪುರದಲ್ಲಿ ಪರ್ವತ ಸೀಳಿನಲ್ಲಿ 43 ಗಂಟೆಗೂ ಹೆಚ್ಚು ಕಾಲ ಸಿಲುಕಿ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕನನ್ನು ಭಾರತೀಯ ಸೇನೆ, ಪರ್ವತಾರೋಹಣ ತಂಡಗಳು ಹಾಗು ಎನ್‌ಡಿಆರ್‌ಎಫ್ ವಿಶೇಷ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿವೆ.
ಸುಮಾರು 23 ವರ್ಷದ ಆರ್ ಬಾಬು ಸಿಲುಕಿದ ಯುವಕ. ಈತ ಚಾರಣಕ್ಕೆ ತೆರಳಿದ್ದಾಗ ಗುಡ್ಡದ ತುದಿಯಲ್ಲಿ ಕಾಲು ಜಾರಿ ಬಿದ್ದು ಬೃಹತ್ ಬಂಡೆಯ ಸೀಳಿನಲ್ಲಿ ಸಿಲುಕಿಕೊಂಡಿದ್ದನು. ಈ ವೇಳೆ ಯುವಕ ತನ್ನ ಮೊಬೈಲ್ ಮೂಲಕ ಫೋಟೋ ವಿಡಿಯೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ. ಇದರಿಂದ ಯುವಕ ಗುಡ್ಡದಲ್ಲಿ ಅಪಾಯಕ್ಕೆ ಸಿಲುಕಿದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ.
ಕೇರಳ ಅಗ್ನಿಶಾಮಕ ದಳ ಮತ್ತು ಮಲಂಪುಳ ಪೊಲೀಸರು ಮಧ್ಯರಾತ್ರಿಯ ವೇಳೆಗೆ ಸ್ಥಳಕ್ಕೆ ತಲುಪಿದ್ದಾರೆ. ಕತ್ತಲಲ್ಲಿ ಗೊತ್ತಾಗದ ಕಾರಣದಿಂದಾಗಿ ಅವರಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ. ನಂತರ ಮಂಗಳವಾರದ ವೇಳೆಗೆ ಪಾಲಕ್ಕಾಡ್ ಜಿಲ್ಲಾಧಿಕಾರಿ ಮೃಣ್ಮಯಿ ಜೋಶಿ ಅವರ ಮನವಿಯಂತೆ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ಯುವಕನನ್ನು ರಕ್ಷಿಸಲು ಯತ್ನಿಸಲಾಗಿದೆ.
ಮದ್ರಾಸ್ ರೆಜಿಮೆಂಟ್ ಸೆಂಟರ್‌ನಿಂದ 12 ಸಿಬ್ಬಂದಿಯ ಒಂದು ತಂಡ ಮತ್ತು ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್‌ನಿಂದ 22 ಸಿಬ್ಬಂದಿಯ ಮತ್ತೊಂದು ತಂಡ ಮತ್ತು ಎನ್‌ಡಿಆರ್‌ಎಫ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿ, ಯುವಕನನ್ನು ಯಶಸ್ವಿಯಾಗಿ ರಕ್ಷಿಸಿವೆ.



