
ಬೆಂಗಳೂರು: ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಮನಗರ ಎಸ್ಪಿ ಆಗಿ ಕೆ ಸಂತೋಷ್ ಬಾಬು, ಬಿಎಂಟಿಸಿ ಭದ್ರತೆ ಹಾಗೂ ಜಾಗೃತ ದಳದ ಉಸ್ತುವಾರಿಯನ್ನಾಗಿ ಜಿ ರಾಧಿಕಾ ಅವರಿಗೆ ನೀಡಲಾಗಿದೆ.
ಬೆಂಗಳೂರು ವೈಟ್ಫೀಲ್ಡ್ ವಿಭಾಗದ ಡಿಸಿಪಿಯಾಗಿ ಎಸ್ ಗಿರೀಶ್, ಚಿತ್ರದುರ್ಗದ ಎಸ್ಪಿಯಾಗಿ ಕೆ ಪರಶುರಾಮ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್. ಗಿರೀಶ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಕೆ. ಸಂತೋಷ್ ಬಾಬು ಅವರನ್ನು ನೇಮಿಸಲಾಗಿದೆ. ಗಿರೀಶ್ ಅವರು ಬೆಂಗಳೂರಿನ ವೈಟ್ ಫಿಲ್ಡ್ ವಿಭಾಗದ ಡಿಸಿಪಿಯಾಗಿ ತೆರಳಲಿದ್ದು, ಬೆಂಗಳೂರಿನ ಗುಪ್ತಚಾರ ವಿಭಾಗದ ಡಿಸಿಪಿಯಾಗಿದ್ದ ಕೆ. ಸಂತೋಷ್ ಬಾಬು ಅವರು ರಾಮನಗರ ಎಸ್ಪಿಯಾಗಿ ಆಗಮಿಸಲಿದ್ದಾರೆ.
ಇದೇ ತಿಂಗಳ ಮೂರರಂದು ರಾಮನಗರ ಜಿಲ್ಲಾಧಿಕಾರಿ ಸಂಕೀರ್ಣದ ಆವರಣದಲ್ಲಿ ನಡೆದ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎದುರೇ ಸಚಿವರು ಮತ್ತು ಸಂಸದರ ನಡುವೆ ಜಾಟಾಪಟಿ ನಡೆದಿತ್ತು. ಇದರ ಭದ್ರತೆಯ ನೇತೃತ್ವವನ್ನು ಗಿರೀಶ್ ವಹಿಸಿದ್ದರು. ಗಲಾಟೆಗೆ ಪೊಲೀಸ್ ವೈಫಲ್ಯವೂ ಕಾರಣವೆನ್ನು ಆರೋಪ ಕೇಳಿ ಬಂದಿತ್ತು.
ಇದೇ 9 ರಿಂದ 13ರ ವರೆಗೆ ಜಿಲ್ಲೆಯಲ್ಲಿ ಮೇಕೆದಾಟು ಪಾದಯಾತ್ರೆಯ ಭದ್ರತೆ ಉಸ್ತುವಾರಿಯನ್ನು ಗಿರೀಶ್ ವಹಿಸಿದ್ದರು. ಪಾದಯಾತ್ರೆಯ 5 ದಿನವೂ ಯಾವುದೇ ಗದ್ದಲಗಳಿಗೆ ಅಸ್ಪದ ಕೊಡದಂತೆ ಪರಿಸ್ಥಿತಿ ನಿರ್ವಹಿಸಿದ್ದರು. ಮಂಗಳವಾರ ಅವರಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಈ ಎಲ್ಲದರ ನಡುವೆ ವರ್ಗಾವಣೆ ಆದೇಶ ಹೊರಬಿದ್ದಿದೆ.



