Breaking NewsLatestಮೆಟ್ರೋರಾಜಕೀಯ

Budget 2022: ರಾಜ್ಯಗಳ ಮೇಲೆ 1 ಲಕ್ಷ ಕೋಟಿ ಸಾಲ ಕಟ್ಟಿರುವುದೇ ಈ ಬಜೆಟ್ ಸಾಧನೆ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ

ಬೆಂಗಳೂರು : ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್​ ಮಂಡನೆಯಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಕಾಗದ ರಹಿತ ಬಜೆಟ್ ಮಾಡಲಾಗಿದೆ. ಕೇಂದ್ರ ಬಜೆಟ್​​ ನಿರಾಶದಾಯಕ ಬಜೆಟ್​​ ಎಂದು ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರು ಎಂದಿದ್ದರೆ, ಆಡಳಿತ ಬಿಜೆಪಿ ಪಕ್ಷದ ನಾಯಕರು ನವಭಾರತ ನಿರ್ಮಾಣಕ್ಕೆ ಈ ಬಜೆಟ್​ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್. ಕೆಲವು ನೀರಾವರಿ ಯೋಜನೆಯ ಪ್ರಸ್ತಾವನೆ ಆಗಿದೆ, ಕಾವೇರಿ – ಪೆನ್ನಾರ್, ಕೃಷ್ಣ – ಗೋದಾವರಿ ಜೋಡಣೆ ಬಗ್ಗೆ ಕಳೆದ 3 ವರ್ಷದಿಂದ ಪ್ರಸ್ತಾವನೆ ಇದೇ , ಆದರೆ ಕಾರ್ಯಗತಗೊಳಿಸಲು ಆಗಿಲ್ಲ, ಹೊಸ ರೀತಿಯ ವಿಚಾರ ಏನು ಇಲ್ಲ ಎಂದಿದ್ದಾರೆ.

– ಹೆಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಭಾರತದ ಉದ್ಯೋಗ ದರವು ಕುಸಿದಿರುವುದು ಸಮಯದಲ್ಲಿ ಈ ಬಜೆಟ್ ಬಂದಿದೆ. ಐತಿಹಾಸಿಕ ನಿರುದ್ಯೋಗ ಮತ್ತು ಕುಂಟುತ್ತಿರುವ ಬೆಳವಣಿಗೆ ಭಾರತದಲ್ಲಿ ಬಡವರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಬಜೆಟ್ 2022ರಲ್ಲಿ ಉದ್ಯೋಗ ಸೃಷ್ಟಿಸುವ ಯಾವ ಕಾರ್ಯಕ್ರಮವೂ ಇಲ್ಲ. ಜನರನ್ನು ಬಡತನದಿಂದ ಹೊರತರಲು ಯಾವುದೇ ಯೋಜನೆಗಳಿಲ್ಲ ಎಂಬುದು ನಿರಾಶದಾಯಕವಾಗಿದೆ.

– ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ

ಇದು ಬಹಳ ನಿರಾಶದಾಯಕ ಬಜೆಟ್ ಆಗಿದ್ದು, ಬಜೆಟ್ ಮೇಲೆ ನಂಬಿಕೆಯೇ ಹೋಗಿದೆ. 25 ಜನ ಬಿಜೆಪಿ ಎಂಪಿ ಗಳು ಕರ್ನಾಟಕದಿಂದ ಇದ್ದಾರೆ, ಏನ್ ತಂದರು ರಾಜ್ಯಕ್ಕೆ ಎಂದು ಪ್ರಶ್ನಿಸಿದ್ದಾರೆ. ಈ ಬಜೆಟ್​ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ, ಈ ಬಜೆಟ್​ ಫೇಲ್​ ಆಗಿದೆ. ನದಿ ಜೋಡಣೆ ವಿಚಾರ ಸಂತೋಷ ಆದರೆ ಬಜೆಟ್ ನಲ್ಲಿ ರಾಜ್ಯಗಳ ಸಹಮತ ಇದ್ದರೇ ಮಾತ್ರ ಜೋಡನೆ ಎಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಕಿಡಿಕಾರಿದ್ದಾರೆ.

– ಪ್ರಜ್ವಲ್ ರೇವಣ್ಣ, ಸಂಸದ

ಈ ಬಜೆಟ್​ನಲ್ಲಿ ಕರ್ನಾಟಕಕ್ಕೆ ಏನು ಸಿಕ್ಕಿಲ್ಲ. ಇದು ನಿರಾಶದಾಯಕ ಬಜೆಟ್, ಕರ್ನಾಟಕಕ್ಕೆ ಸಂಪೂರ್ಣ ನಿರಾಸೆಯಾಗಿದೆ ಎಂದಿದ್ದಾರೆ.

-ಜಿ.ಸಿ.ಚಂದ್ರಶೇಖರ, ರಾಜ್ಯಸಭಾ ಸದಸ್ಯ

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್ ಅವರು ಇಂದು ಬಜೆಟ್ ಮಂಡನೆ ಮಾಡಿದ್ದಾರೆ. 2 ವರ್ಷಗಳಿಂದ ಕರೋನಾದಿಂದ ಲಕ್ಷಾಂತರ ಜನ ಸತ್ತಿದ್ದು, ಕೋಟ್ಯಂತರ ಜನ ತೊಂದರೆ ಅನುಭವಿಸಿದ್ದಾರೆ. ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೋವಿಡ್ ಸಂತ್ರಸ್ತರು ಹಾಗೂ ಸತ್ತವರಿಗೆ ಪರಿಹಾರ ನೀಡಲಿದೆ ಎಂಬ ನಿರೀಕ್ಷೆ ಮಾಡಿದ್ದೆವು. ಅವೆಲ್ಲವೂ ಸಂಪೂರ್ಣವಾಗಿ ಹುಸಿಯಾಗಿವೆ.

-ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಧ್ಯಕ್ಷ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ವಂಚಿಸಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದರೂ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆಯನ್ನು ಅವರು ಕೊಟ್ಟಿಲ್ಲ. ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯಗಳ ತಲೆ ಮೇಲೆ 1 ಲಕ್ಷ ಕೋಟಿ ಸಾಲ ಕಟ್ಟಿರುವುದೇ ಈ ಬಜೆಟ್ ಸಾಧನೆಯಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

– ಪ್ರಿಯಾಂಕ ಖರ್ಗೆ, ಮಾಜಿ ಸಚಿವ

ಇದು ಬಜೆಟ್ ಎಂಬುದಕ್ಕಿಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕ ಭಾಷಣಗಳಲ್ಲಿ ಹೇಳುವ ಸರ್ಕಾರದ ಸಾಧನೆಯ ಪಟ್ಟಿಯನ್ನು ಎಲ್ಲಾ ಸಂಸದರನ್ನು ಕೂರಿಸಿಕೊಂಡು ಒಪ್ಪಿಸುವಂತಿದೆ. ಒಟ್ಟಾರೆ 39 ಲಕ್ಷ ಕೋಟಿ ರೂಪಾಯಿ ಬಜೆಟ್ ನಲ್ಲಿ ಕೋವಿಡ್ ಪಿಡುಗಿನ ಸಂದರ್ಭ ಕೆಲಸ ಮಾಡಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು ಬಿಟ್ಟರೆ ಉಳಿದಂತೆ ಸಂಕಷ್ಟಕ್ಕೆ ಸಿಲುಕಿದವರಿಗೆ ಯಾವುದೇ ರೀತಿಯ ಭರವಸೆ ಮೂಡಿಸುವ ಅಂಶಗಳಿಲ್ಲ. ಈ ಬಜೆಟ್ ನಲ್ಲಿ ಉಪ್ಪು, ಉಳಿ, ಖಾರ ಯಾವುದೂ ಇಲ್ಲ. ಕಾರಣ ಮೋದಿ ಅವರು ‘ಯಾರೂ ತಿನ್ನಬೇಡಿ’ ಎಂದು ಹೇಳಿರುವುದರಿಂದ ಇವರು ಜನಸಾಮಾನ್ಯರೂ ಏನನ್ನೂ ತಿನ್ನದಂತೆ ಮಾಡಲು ಹೊರಟಿದ್ದಾರೆ

-ಡಿ.ಕೆ‌.‌ ಸುರೇಶ್, ಸಂಸದರು

ಇದು ಕೇವಲ ಬಜೆಟ್​ ಅಲ್ಲ “ಗ್ರೀನ್​ ಬಜೆಟ್​” ಆಗಿದ್ದು, ನವಭಾರತ ನಿರ್ಮಾಣಕ್ಕೆ ಈ ಬಜೆಟ್​ ಸಹಕಾರಿಯಾಗಲಿದೆ. ಜನರ ಆಸೆ ಆಕಾಂಕ್ಷೆ ಭರವಸೆ ಈಡೇರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮುಂದಿನ ಪೀಳಿಗೆ ಬಗ್ಗೆಯು ಸಹ ಇದರಲ್ಲಿ ಗಮನ ಹರಿಸಲಾಗಿದೆ.

-ಎಂ ಪಿ ರೇಣುಕಾಚಾರ್ಯ, ಬಿಜೆಪಿ ಶಾಸಕ

ಕೇಂದ್ರ ಸರ್ಕಾರದ ಬಜೆಟ್‌ನ್ನು ಸ್ವಾಗತಿಸುತ್ತೇನೆ. ಮಹಾಮಾರಿ ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದ ಆರ್ಥಿಕತೆಗೆ ಚೈತನ್ಯ ತುಂಬುವ ಅತ್ಯುತ್ತಮ ಬಜೆಟ್‌ನ್ನು ಕೇಂದ್ರ ಸರ್ಕಾರ ನೀಡಿದೆ. ಗ್ರಾಮೀಣಾಭಿವೃದ್ಧಿ, ನದಿಗಳ ಜೋಡಣೆ, ಮನೆ ಮನೆಗೂ ಶುದ್ಧ ಕುಡಿಯುವ ನೀರು, ಪ್ರತಿ ಗ್ರಾಮಕ್ಕೂ 5ಜಿ ಸಂಪರ್ಕ, ಮೂಲ ಸೌಕರ್ಯ ಸೇರಿದಂತೆ ಎಲ್ಲಾ ವಲಯಕ್ಕೂ ಆದ್ಯತೆ ನೀಡುವ ಮೂಲಕ
ಎಲ್ಲಾ ವರ್ಗದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಜನಪರ ನೀಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ, ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

-ಡಾ.ನಾರಾಯಣಗೌಡ, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು

Spread the love

Related Articles

Leave a Reply

Your email address will not be published. Required fields are marked *

Back to top button