ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಧಾರ

ಕೊವಿಡ್ ಕಾರಣದಿಂದ ಸಾಕಷ್ಟು ನಟ,ನಟಿಯರು ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಸಿಂಪಲ್ ಆಗಿ ಬರ್ತಡೇ ಆಚರಿಕೊಳ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಭಾರಿಯೂ ಸಿಂಪಲ್ ಹುಟ್ಟುಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಫೆಬ್ರವರಿ 16 ಬಂದ್ರೆ ದಾಸನ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಅಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಹೀಗಾಗಿ ದರ್ಶನ್ರನ್ನ ಡೈರೆಕ್ಟ್ ಆಗಿ ಮೀಟ್ ಮಾಡಬಹುದು, ವಿಶ್ ಮಾಡಬಹುದು ಅಂದುಕೊಳ್ತಾರೆ ಅವ್ರ ಅಭಿಮಾನಿಗಳು. ಆದ್ರೆ ಕಳೆದು ಮೂರು ನಾಲ್ಕು ವರ್ಷಗಳಿಂದ ಅದು ಸಾಧ್ಯವಾಗಿಲ್ಲ. ಕೋವಿಡ್ ಕಾರಣದಿಂದ ದರ್ಶನ್ ಸಿಂಪಲ್ ಆಗಿ ಬರ್ತಡೇ ಆಚರಿಸಿಕೊಳ್ತಿದ್ದಾರೆ. ಈ ಬಾರಿಯೂ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ತಿರುವ ದರ್ಶನ್ ಮನೆ ಬಳಿ ಬರದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
“ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. 2021ರ ಕರಾಳ ದಿನಗಳು ಮತ್ತೆ ಮರುಕಳಿಸದಿರಲಿ. ಕೋವಿಡ್ ನಿಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ. ಈ ಬಾರಿಯೂ ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿ ಇರುವುದಿಲ್ಲ. ಬಹಳಷ್ಟು ದೂರದಿಂದ ಮನೆಯ ಹತ್ತಿರ ಬಂದು ನಿರಾಶರಾಗದಿರಿ. ನಿಮ್ಮೆಲ್ಲರನ್ನು ನೋಡಿ ಮುಖಾಮುಖಿಯಾಗುವ ಹಂಬಲ ನನಗೂ ಸಾಕಷ್ಟಿದೆ.
ಇವೆಲ್ಲದಕ್ಕೂ ಸದ್ಯದ ಪರಿಸ್ಥಿತಿ ಸೂಕ್ತವಲ್ಲವೆಂಬುದು ನನ್ನ ಭಾವನೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಭೇಟಿ ಮಾಡುವೆ ಎಂದು ನಂಬಿದ್ದೇನೆ. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನಿ ಇಟ್ಟಿರುವ ನೀವು ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ ಎಂದು ಫೇಸ್ ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ದರ್ಶನ್ ಪೇಸ್ಬುಕ್ ಪೇಜ್ನಲ್ಲಿ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಇದೇ 16ನೇ ತಾರೀಕು ನನ್ನ ಹುಟ್ಟಿದ ಹಬ್ಬ ಎನ್ನುವುದಕ್ಕಿಂತ ನಿಮ್ಮ ಹುಟ್ಟಿದ ಹಬ್ಬದ ಹಾಗೆ ಆಚರಿಸುತ್ತೀರಿ. ಹುಟ್ಟಿದ ಹಬ್ಬ ಮಾಡಬೇಕು ಅಂತ ಎಲ್ಲರಿಗೂ ಆಸೆ ಇದೆ. ಈ ಸಲ ಪೊಲೀಸ್ ಪರ್ಮಿಷನ್ ಸಿಗೋದು ಕಷ್ಟ. ಅದನ್ನ ಹೇಗಾದರು ಮಾಡಿ ತೆಗೆದುಕೊಳ್ಳಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಹೋದ ವರ್ಷ ನಡೆದ ಘಟನೆ. ಪುನೀತ್ ರಾಜ್ಕುಮಾರ್ ನಮ್ಮನ್ನ ಅಗಲಿರುವುದು. ಅದಾದ್ಮೇಲೆ ನಾನು ಹುಟ್ಟಿದ ಹಬ್ಬ ಆಚರಿಸಿಕೊಳ್ಳುವುದು ನನ್ನ ಮನಸಿಗೆ ಸರಿಯಾಗಿ ಕಾಣಿಸುವುದಿಲ್ಲ. ಈ ಸಲ ಬೇಡ ಅಂತ ಅನಿಸುತ್ತಿದೆ ಎಂದು ದರ್ಶನ್ ವಿಡಿಯೋದಲ್ಲಿ ಹೇಳಿದ್ದಾರೆ.



