Pune Building Collapse: ಪುಣೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಐವರು ಕಾರ್ಮಿಕರ ಸಾವು

ಪುಣೆ: ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಐವರು ಮೃತಪಟ್ಟಿರುವ ಘಟನೆ ಪುಣೆಯ ಯರವಾಡ ಪ್ರದೇಶದ ಶಾಸ್ತ್ರಿನಗರ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
ಮೃತರು ಮತ್ತು ಗಾಯಗೊಂಡವರೆಲ್ಲರೂ ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರು ಎಂದು ಗುರುತಿಸಲಾಗಿದೆ. ಪೊಲೀಸರು ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಮೂವರನ್ನು ಬಂಧಿಸಿದ್ದಾರೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತಾಬ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಘಟನೆಯ ತನಿಖೆಗೆ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ಆದೇಶ ಹೊರಡಿಸಲಾಗಿದೆ. ಮೇಲ್ನೋಟಕ್ಕೆ, ರಚನೆಯ ಅಡಿಪಾಯದ ವೈಫಲ್ಯವೇ ಕಾರಣ ಎಂದು ತೋರುತ್ತದೆ. ನಾವು ತಾಂತ್ರಿಕ ತಜ್ಞರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಪುಣೆ ಮುನ್ಸಿಪಲ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
