ಕೋವಿಡ್ ಬಂದರೂ ಕಾಲೇಜಿಗೆ ಹಾಜರಾದ ಪ್ರಾಧ್ಯಾಪಕ : 13 ಜನ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

ಕಾರವಾರ : ಕೋವಿಡ್ ಪಾಸಿಟಿವ್ ಇದ್ದರೂ ಮುಚ್ಚಿಟ್ಟು ಪದವಿ ಕಾಲೇಜಿನಲ್ಲಿ ಪಾಠ ಮಾಡಿದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕನಿಂದಾಗಿ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಗೋಖಲೆ ಸೆಂಟಿನರಿ ಪದವಿ ಕಾಲೇಜಿನಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ ಪ್ರಾಧ್ಯಾಪಕನಿಗೆ ಕೋವಿಡ್ ಪಾಸಿಟಿವ್ ವರದಿಯಾಗಿತ್ತು. ಪಾಸಿಟಿವ್ ಬಂದಿದ್ದರಿಂದ ಹೋಮ್ ಐಸೋಲೇಷನ್ ಗೆ ಸೂಚಿಸಲಾಗಿತ್ತು. ಆದರೆ ರಜೆ ಹಾಕಿದರೆ ಗಳಿಕೆ ರಜೆ ವ್ಯರ್ಥವಾಗುತ್ತದೆ ಎನ್ನುವ ಕಾರಣದಿಂದ ರಜೆ ಹಾಕದೇ ಉಪನ್ಯಾಸಕ ಕಾಲೇಜಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಇದರಿಂದ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾಗಿದೆ. ಸದ್ಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದ 320 ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಇಂದು ಕೋವಿಡ್ ತಪಾಸಣೆಗೊಳಪಡಿಸಿದೆ.
ಗೋಖಲೆ ಸೆಂಟಿನರಿ ಪದವಿ ಕಾಲೇಜಿನಲ್ಲಿ ಹಾಗೂ ಕೆಲವು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ವರದಿ ಬರುತ್ತಿದ್ದಂತೆ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಇದರಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಗೈರಾಗಿದ್ದಾರೆ.
ಅಂಕೋಲಾದ ಕಾಲೇಜುಗಳಲ್ಲಿ ಹಲವು ಮಕ್ಕಳಲ್ಲಿ ಶೀತ ಮತ್ತು ಜ್ವರ ಕಾಣಿಸಿಕೊಂಡಿದೆ. ಆದರೆ ಹಲವು ಮಕ್ಕಳು ಕೋವಿಡ್ ತಪಾಸಣೆಗೆ ಹಿಂಜರಿಯುತ್ತಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹಲವು ವಿದ್ಯಾರ್ಥಿಗಳು ಕೋವಿಡ್ ಲಕ್ಷಣವಿದ್ದರೂ ತರಗತಿಗೆ ಹಾಜರಾಗುತ್ತಿದ್ದು, ಮತ್ತಷ್ಟು ಸೋಂಕು ಹೆಚ್ಚಾಗುವ ಭೀತಿ ಆವರಿಸಿದೆ.



