ರಾಜ್ಯ ಪೊಲೀಸ್ ಇಲಾಖೆಯಿಂದ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ

ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಯುವತಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ, ವಿದ್ಯಾರ್ಥಿನಿಯರಿಗೆ ಸುರಕ್ಷತೆ ಎಂಬುದು ಇತ್ತೀಚಿಗೆ ಸವಾಲಿನ ಕಾರ್ಯವಾಗಿದ್ದು ಅವರಲ್ಲಿ ಸ್ವಯಂ ರಕ್ಷಣಾ ಕೌಶಲ್ಯ(SELF DEFENCE SKILL)ಗಳನ್ನು ಬೆಳೆಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಒಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ (KSRP) ಮಹಿಳಾ ಸಿಬ್ಬಂದಿಗಳು, 13 ರಿಂದ 25 ವರ್ಷದೊಳಗಿನ ಮಹಿಳೆಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ ನೀಡುವ ಕಾರ್ಯವನ್ನು ಆರಂಭಿಸಲಾಗಿದೆ.
KSRP ADGP ಆಲೋಕ ಕುಮಾರ ಸೂಚನೆ ಮೇರೆಗೆ ಬೆಳಗಾವಿಯ KSRP 2ನೇ ಪಡೆ, ಸಿಎಆರ್/ಡಿಎಆರ್ ನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪೊಲೀಸ್ ಇಲಾಖೆಯ ಯುವ ಮಹಿಳಾ ಸಿಬ್ಬಂದಿಗಳಿಗೆ ನುರಿತ ಕರಾಟೆ ಮತ್ತು ಜುಡೋ ತರಬೇತುದಾರರಿಂದ ತರಬೇತಿ ಒದಗಿಸಿ ಅವರಿಂದ ಬೆಳಗಾವಿ ನಗರದ ವಿವಿಧ 10 ಪ್ರೌಢ ಶಾಲೆ/ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.ಇದುವರೆಗೂ ಒಟ್ಟು ಸುಮಾರು 500 ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ತರಬೇತಿ ಆರಂಭಿಸಲಾಗಿದೆ.
ವಿದ್ಯಾರ್ಥಿನಿಯರಿಗೆ ಸಂಧಿಗ್ಧ ಸಂದರ್ಭ ಎದುರಾದರೂ ಪಾರಾಗುವ ಆತ್ಮ ವಿಶ್ವಾಸ, ಧೈರ್ಯವನ್ನು ಹೆಣ್ಣು ಮಕ್ಕಳಲ್ಲಿ ಮೂಡಿಸುವ ಪ್ರಯತ್ನವಾಗಿದ್ದು ,ಶಾಲಾ ಕಾಲೇಜಿಗೆ ತೆರಳುವ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ಅತ್ಯಂತ ಅವಶ್ಯಕವಾಗಿದೆ ಎಂದು KSRP2ನೆ ಪಡೆ ಕಮಾಂಡೆಂಟ್ ಹಂಜಾ ಹುಸೇನ್ ತಿಳಿಸಿದ್ದಾರೆ.
ಇನ್ನು ಪ್ರಾರಂಭಿಕವಾಗಿ ಪೊಲೀಸ್ ಸಿಬ್ಬಂದಿ ಕುಟುಂಬದ ಹೆಣ್ಣು ಮಕ್ಕಳಿಗೆ ತರಬೇತಿ ಪ್ರಾರಂಭಿಸಿ ಹಂತ ಹಂತವಾಗಿ ಎಲ್ಲರಿಗೂ ವಿಸ್ತರಿಸಲಾಗಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದುಷ್ಕೃತ್ಯ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಿ ತರಬೇತಿ ನೀಡಲು ಚಿಂತಿಸಲಾಗಿದೆ. KSRP 2ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ಹಾಗು ಬೆಳಗಾವಿ ಜಿಲ್ಲಾ ಕರಾಟೆ ಅಸೊಸಿಯೇಷನ್‌ರವರ ಸಹಯೋಗದಲ್ಲಿ ಹೆಚ್ಚಿನ ತರಬೇತಿ ಮೂಲಕ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಸಜ್ಜುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ
ಇನ್ನು ಇದೆ ತಿಂಗಳು 8 ರಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೆಳಗಾವಿಗೆ ಅಗಮಿಸಲಿದ್ದು, ಕೆ.ಎಸ್.ಆರ್.ಪಿ. ತರಬೇತಿ ಶಾಲೆ ಕಂಗ್ರಾಳಿಯಲ್ಲಿ ಮೊದಲನೆಯ ತಂಡದ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ನಂತರ “ಸ್ವಯಂ ರಕ್ಷಣಾ ಕೌಶಲ್ಯ”(SELF DEFENCE TRAINING) ತರಬೇತಿಯ ಉದ್ಘಾಟನೆಯನ್ನ ಮಾಡಲಿದ್ದಾರೆ.
ಗೃಹ ಮಂತ್ರಿಯ ಸಮ್ಮುಖದಲ್ಲಿ ತರಬೇತಿ ಪಡೆಯುತ್ತಿರುವ ಕೆ.ಎಸ್.ಆರ್.ಪಿ ಮಹಿಳಾ ಅಧಿಕಾರಿಗಳು ‘ಅಣುಕು ಪ್ರದರ್ಶನ’ ನೀಡಲಿದ್ದಾರೆ.




