ಕಾಂಗ್ರೆಸ್ನತ್ತ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಒಲವು?

ರಾಜೇಶ್ ಕೊಂಡಾಪುರ
ರಾಮನಗರ: ಚನ್ನಪಟ್ಟಣದಲ್ಲಿ ಅತೃಪ್ತ ಜೆಡಿಎಸ್ ಮುಖಂಡರ ಪಕ್ಷಾಂತರ ಬಿರುಸುಗೊಂಡಿದೆ. ಕೆಲ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇದ್ರ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನೂ ಹಲವುಮಂದಿ ಬಿಜೆಪಿ ಸೇರುವ ಸಂಭವ ಇದೆ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಕೂಡ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎನ್ನುವ ಮಾತುಗಳು ಅವರ ಬೆಂಬಲಿಗರಿಂದ ಕೇಳಿ ಬರುತ್ತಿದೆ.
ಅಶ್ವತ್ಥ್ ಕಾಂಗ್ರೆಸ್ ಸೇರುವ ಕುರಿತಾಗಿ ಹಲವು ಸುತ್ತಿನ ಮಾತುಕತೆ ನಡೆಸಿರುವುದನ್ನ ಮೂಲಗಳು ಖಚಿತಪಡಿಸಿವೆ. ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನಿಕಟವರ್ತಿಯಾಗಿರುವ ಅಶ್ವತ್ಥ್ ಅವರು ಕಾಂಗ್ರೆಸ್ ಸೇರ್ಪಡೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿಯೊಂದೇ ಬಾಕಿ ಎಂದು ಆಪ್ತ ಮೂಲಗಳು ತಿಳಿಸಿವೆ.
ಸಿ.ಪಿ.ಯೋಗೇಶ್ವರ್ ಅವರು ಆಪರೇಷನ್ ಕಮಲಕ್ಕೆ ಒಳಗಾಗಿ 2009ರ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕೆ ಧುಮುಕಿದ್ದರು. ಹೀಗಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ನಿಂದ ಅಶ್ವತ್ಥ್ ಆಯ್ಕೆಯಾಗಿದ್ದರು. ಇದಾದ ವರ್ಷಕ್ಕೆ ಅಶ್ವತ್ಥ್ ಅವರನ್ನು ಆಪರೇಷನ್ ಕಮಲದ ಖೆಡ್ಡಕ್ಕೆ ಬೀಳಿಸುವಲ್ಲಿ ಯೋಗೇಶ್ವರ್ ಸಫಲರಾಗಿದ್ದರು. ಮತ್ತೊಂದು ಉಪ ಚುನಾವಣೆ ಎದುರಾದಾಗ ಯೋಗೇಶ್ವರ್ ಗೆದ್ದರು. ಮಾಜಿ ಸಚಿವ ಎಂ.ವರದೇಗೌಡ ಅವರು 1999ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಅದಾದ ಬಳಿಕ ಎಚ್.ಡಿ.ದೇವೇಗೌಡ ಅವರ ಕೃಪಾಕಟಾಕ್ಷದೊಂದಿಗೆ ಜೆಡಿಎಸ್ ಪರಿವಾರದ ಸಾರಥ್ಯ ವಹಿಸಿದ ಅಶ್ವತ್ಥ್ ತಾಲೂಕಿನಾದ್ಯಂತ ಪಕ್ಷ ಸಂಘಟನೆಗೆ ಇಳಿದಿದ್ದರು.
2004 ಹಾಗೂ 2008ರ ಚುನಾವಣೆಯಲ್ಲಿ ಅಶ್ವತ್ಥ್ ಪರಾಜಯಗೊಂಡಿದ್ದರು. ಆಪರೇಷನ್ ಕಮಲಕ್ಕೆ ಒಳಗಾದ ನಂತರ ನೇಪಥ್ಯಕ್ಕೆ ಸರಿದಿದ್ದರು. ಅಶ್ವತ್ಥ್ ಸಹೋದರ, ಉದ್ಯಮಿ ಎಂ.ಸಿ.ಕರಿಯಪ್ಪ ಅವರು ಕಳೆದ ಜಿಪಂ ಚುನಾವಣೆಯಲ್ಲಿ ಜೆಡಿಎಸ್ನಿಂದ ಮಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಕಾಂಗ್ರೆಸ್ ಹುರಿಯಾಳು ಆಗಿದ್ದವರು ಯೋಗೇಶ್ವರ್ ಸಹೋದರ ಸಿ.ಪಿ.ರಾಜೇಶ್. ನೀರಾವರಿ ಅಲೆಯಲ್ಲಿ ರಾಜೇಶ್ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಎದುರಾದ ಸೋಲಿನ ನಂತರ ಅಶ್ವತ್ಥ್ ಕುಟುಂಬ ಮತ್ತು ಜೆಡಿಎಸ್ ಪಾಳೆಯದ ಸಂಬಂಧ ಅಷ್ಟಕಷ್ಟೇ ಎನ್ನುವಂತಿತ್ತು.
ನಗರಸಭೆ ಚುನಾವಣೆ ವೇಳೆ ಕೆಲ ವಾರ್ಡ್ಗಳ ಟಿಕೆಟ್ ನಿರ್ಧರಿಸುವಲ್ಲಿ ಕರಿಯಪ್ಪ ಪಾತ್ರ ವಹಿಸಿದ್ದರು. ಇದರ ಹೊರತಾಗಿ ಜೆಡಿಎಸ್ನಲ್ಲಿ ಅಶ್ವತ್ಥ್ ಅವರಾಗಲೀ, ಕರಿಯಪ್ಪ ಅವರಾಗಲೀ ಮಾನ್ಯತೆ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿರಲಿಲ್ಲ. ಕುಮಾರಸ್ವಾಮಿ ಅವರು ಕಳೆದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ಅಶ್ವತ್ಥ್ ಕುಟುಂಬ ಪಕ್ಷನಿಷ್ಠೆ ತೋರಿತ್ತು. ಆದರೆ, 2013ರಲ್ಲಿ ಅಶ್ವತ್ಥ್ ಕುಟುಂಬ ಕಡೆಗಣನೆಗೆ ಜೆಡಿಎಸ್ ದೊಡ್ಡ ಬೆಲೆ ತೆರೆಬೇಕಾಯಿತು ಎನ್ನುವುದನ್ನು ಮರೆಯುವಂತಿಲ್ಲ.
ರಾಮನಗರ ಜಿಲ್ಲೆ ಮತ್ತು ಚನ್ನಪಟ್ಟಣ ಕ್ಷೇತ್ರ ರಾಜಕಾರಣ, ಅಭಿವೃದ್ಧಿ ಸಹಿತ ಯಾವೊಂದು ವಿಚಾರದಲ್ಲೂ ಅಶ್ವತ್ಥ್ ಅವರನ್ನು ದಳಪತಿಗಳು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಇತ್ತೀಚೆಗೆ ಚನ್ನಪಟ್ಟಣದಲ್ಲಿ ಹಲವು ಅತೃಪ್ತ ನಾಯಕರನ್ನು ಸಂಪರ್ಕಿಸಿರುವ ಬಿಜೆಪಿ ಮುಖಂಡರು ಅಶ್ವತ್ಥ್ ಅವರನ್ನೂ ಸೆಳೆಯುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸಿರುವುದು ಗುಟ್ಟಿನ ಸಂಗತಿಯೇನಲ್ಲ. ಆದರೆ, ಅಶ್ವತ್ಥ್ ಒಲವು ಕಾಂಗ್ರೆಸ್ ಕಡೆಗಿರುವುದು ಸ್ಪಷ್ಟವಾಗಿದೆ.
ರಾಮನಗರದ ಮಾಜಿ ಶಾಸಕ ಕೆ.ರಾಜು ಮತ್ತು ಎಂ.ಸಿ.ಅಶ್ವತ್ಥ್ ಇಬ್ಬರೂ ಕಳೆದ ಚುನಾವಣೆಗೆ ಮುನ್ನವೇ ಜೆಡಿಎಸ್ ತೊರೆದು ಹೋದ ಚಲುವರಾಯಸ್ವಾಮಿ, ಜಮೀರ್, ಬಾಲಕೃಷ್ಣ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಆಗಾಗ್ಗೆ ಜೆಡಿಎಸ್ ತೊರೆದ ನಾಯಕರೊಟ್ಟಿಗೆ ಅಶ್ವತ್ಥ್ ಕಾಣಿಸಿಕೊಳ್ಳುತ್ತಾ ಬಂದಿದ್ದರು. ಆ ನಾಯಕರೊಟ್ಟಿಗಿನ ಬಾಂಧವ್ಯವೇ ಈಗ ಅಶ್ವತ್ಥ್ ಕಾಂಗ್ರೆಸ್ನತ್ತ ಸಾಗಲು ಕಾರಣವಾಗಿದೆ.
ಸದ್ಯದ ಮಟ್ಟಿಗೆ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಅಶ್ವತ್ಥ್ ಅವರು ಮೇಕೆದಾಟು ಪಾದಯಾತ್ರೆ ಪುನಾರಂಭಕ್ಕೆ ಮುನ್ನವೇ ಕೈ ಪಾಳೆಯ ಸೇರ್ಪಡೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಶ್ವತ್ಥ್ ಅವರೇ ಕಾಂಗ್ರೆಸ್ ಹುರಿಯಾಳು ಆಗುವ ಸಂಭವವಿದೆ. ಈ ಮೂಲಕ ಚನ್ನಪಟ್ಟಣದಲ್ಲಿ ಮೂರಾಬಟ್ಟೆಯಾಗಿರುವ ಕಾಂಗ್ರೆಸ್ ಕಾಯಕಲ್ಪಕ್ಕೂ ಡಿಕೆಎಸ್ ಸಹೋದರರು ಮುನ್ನುಡಿ ಬರೆಯಲು ಹೊರಟಿದ್ದಾರೆ.




