ನಿವೃತ್ತರಾಗಿ ಮರಳಿದ ಮೂವರು ಯೋಧರಿಗೆ ಹುಟ್ಟೂರಿನಲ್ಲಿ ಸ್ವಾಗತ

ಕಲಬುರ್ಗಿ: ಆ ಯೋಧರು ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದರು. ತಾಯ್ನಾಡಿನ ಸೇವೆ ಮಾಡಿ ಮರಳಿ ಊರಿಗೆ ಆಗಮಿಸಿದ್ದ ಯೋಧರಿಗೆ ಗ್ರಾಮಸ್ಥರು ಭಾರತ್ ಮಾತಾಕೀ ಜೈ, ವಂದೇ ಮಾತರಂ ಎಂಬ ಜಯಘೋಷಗಳೊಂದಿಗೆ ಅದ್ದೂರಿ ಸ್ವಾಗತ ಕೋರಿ, ಗ್ರಾಮದ ತುಂಬೆಲ್ಲ ಭವ್ಯ ಮೆರವಣಿಗೆ ಮಾಡಿದ್ದಾರೆ. ಮಹಿಳೆಯರು ತಿಲಕ ಇಟ್ಟು ಆರತಿ ಬೆಳಗಿ ತಮ್ಮೂರಿನ ವೀರಯೋಧರಿಗೆ ಬರಮಾಡಿಕೊಂಡರು.
ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಮರತೂರು ಗ್ರಾಮದಲ್ಲಿ ಗ್ರಾಮದ ಮೂವರು ಯೋಧರಿಗೆ ಭವ್ಯವಾದ ಸ್ವಾಗತ ಕೋರಲಾಯಿತು. ಸೇನೆ ಹಾಗೂ ಬಿಎಸ್ಎಫ್ನಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮರತೂರು ಗ್ರಾಮದ ಶರಣಪ್ಪ ದುಗ್ಗೊಂಡ, ಜಗದೀಶ್ ಠಾಕೂರ್ ಮತ್ತು ಶಿವಾನಂದ ಧರ್ಮಾಪುರರನ್ನ ಗ್ರಾಮದ ಅಂಬೇಡ್ಕರ್ ವೃತ್ತದಿಂದ ತೆರೆದ ಜೀಪಿನಲ್ಲಿ ಗ್ರಾಮಸ್ಥರು ತ್ರೀವರ್ಣ ಧ್ವಜಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ, ಇಡೀ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿ, ವಂದೇ ಮಾತಾರಂ, ಭಾರತ್ ಮಾತಾಕೀ ಜೈ ಎಂಬ ಜಯಘೋಷ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲದೆ ಗ್ರಾಮದ ಮಹಿಳೆಯರು ಆರತಿ ಎತ್ತಿ ತಿಲಕವಿಟ್ಟು ಆತ್ಮೀಯವಾಗಿ ತಮ್ಮೂರಿನ ವೀರಯೋಧರನ್ನ ಬರಮಾಡಿಕೊಂಡರು.
ಭಾರತೀಯ ಗಡಿ ಭದ್ರತಾ ಪಡೆ, ಭಾರತೀಯ ಸೇನೆಯಲ್ಲಿ ಜಮ್ಮು ಕಾಶ್ಮೀರ, ಜಾರ್ಖಾಂಡ್, ಗುಜರಾತ್, ಪಂಜಾಬ್ ಗಡಿ ಸೇರಿದಂತೆ ದೇಶದ ಹಲವು ಗಡಿಗಳಲ್ಲಿ ಸೇವೆ ಸಲ್ಲಿಸಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ದೇಶ ಸೇವೆ ಮಾಡಬೇಕೆಂದ ಇಚ್ಛೆಯಿಂದ ಒಂದೇ ಗ್ರಾಮದ ಮೂವರು ಯೋಧರು ಸೇನೆಗೆ ಸೇರಿದ್ದರು. ಇದೀಗ ಸುದೀರ್ಘ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ್ದಾಗ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದನ್ನ ಕಂಡು ಸೈನಿಕರು ಭಾವುಕರಾದರು.
ರಾಜಕಾರಣಿಗಳಿಗೆ ಅದ್ದೂರಿ ಮೆರವಣಿಗೆ ಸನ್ಮಾನ ಮಾಡುವ ಜನರ ಮಧ್ಯೆ, ಮರತೂರು ಗ್ರಾಮಸ್ಥರು ದೇಶ ಸೇವೆ ಮಾಡಿ ಬಂದ ವೀರಯೋಧರಿಗೆ ಭರ್ಜರಿ ಸ್ವಾಗತ ಕೋರಿದ್ದು ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.




