ಮರಾಠ ಕೋಟಾದಲ್ಲಿ ನನಗೆ ಮಂತ್ರಿ ಪದವಿ ಸಿಗಬೇಕು: ಶಾಸಕ ಅನಿಲ್ ಬೆನಕೆ

ಬೆಳಗಾವಿ : ಜಿಲ್ಲೆಯಲ್ಲಿ ಎದ್ದಿರುವ ಅಸಮಾಧಾನದ ಹೊಗೆ ಸದ್ಯಕ್ಕೆ ಅಂತೂ ನಿಲ್ಲುವ ಹಾಗೆ ಕಾಣುತ್ತಿಲ್ಲ, ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ಕೊಡದೇ ಇದ್ದರೆ ಮಾರಾಠ ಕೋಟಾಗೆ ಒಂದು ಸ್ಥಾನ ನೀಡಬೇಕು ಎಂದು ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಆಗ್ರಹಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶ್ರೀಮಂತ ಪಾಟೀಲ್ ಪಕ್ಷ ಬಿಟ್ಟು ಬಂದಿದ್ದಾರೆ ಅವರಿಗೆ ಸಚಿವ ಸ್ಥಾನ ಕೊಡಬಹುದು. ಅವರಿಗೆ ಕೊಡದಿದ್ದರೇ ನನಗೆ ಮಂತ್ರಿ ಸ್ಥಾನ ಕೊಡುವಂತೆ ಕೇಳುತ್ತೇನೆ. ಮಂತ್ರಿ ಸ್ಥಾನ ಕೊಡದಿದ್ದರು ನಾವು ಒಕ್ಕಟ್ಟಾಗಿ ಕೆಲಸ ಮಾಡುತ್ತೇವೆ. ಬಹಳ ವರ್ಷದಿಂದ ಬೆಳಗಾವಿ ತಾಲೂಕಿಗೆ ಮಂತ್ರಿ ಸ್ಥಾನ ಕೊಡಲಿಲ್ಲ ಬೆಳಗಾವಿ ತಾಲೂಕಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬ ಇಚ್ಛೆ ನನ್ನದು. ಮಂತ್ರಿ ಸ್ಥಾನ ಕೊಟ್ಟರೇ ಒಳ್ಳೆಯದಾಗುತ್ತದೆ. ನಾನು ಎಲ್‌ಎಲ್‌ಬಿ ರ‍್ಯಾಂಕ್ ಹೋಲ್ಡರ್ ಇದ್ದೇನೆ. ಮಂತ್ರಿ ಸ್ಥಾನ ಕೊಟ್ಟರೇ ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮತ್ತೊಂದು ಕಡೆ ಲಕ್ಷ್ಮಣ ಸವದಿ, ಅಭಯ್ ಪಾಟೀಲ್ ,ದುರ್ಯೋಧನ ಐಹೊಳೆ ಇವರು ಕೂಡ ತಮಗೆ ಮಂತ್ರಿ ಸ್ಥಾನ ನೀಡಬೇಕು ಎನ್ನುತ್ತಿದ್ದು ಬಿಜೆಪಿ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.
