ನಿರ್ಭಯಾ ಅತ್ಯಾಚಾರಿಗಳಿಗೆ ನೀಡಿದ ಶಿಕ್ಷೆಯನ್ನೇ ಮೈಸೂರು ಅತ್ಯಾಚಾರಿಗಳಿಗೆ ನೀಡಿ: ಇಂದ್ರಜಿತ್ ಲಂಕೇಶ್ ಒತ್ತಾಯ

ಮೈಸೂರು: ನಿರ್ಭಯಾ ಕೇಸ್ ನಂತರ ಅತ್ಯಾಚಾರಿಗಳಿಗೆ ಯಾವ ಶಿಕ್ಷೆಯನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ತೀರ್ಮಾನ ಮಾಡಿದೆಯೋ ಅದನ್ನೇ ಮೈಸೂರಿನ ಪ್ರಕರಣಕ್ಕೂ ಜಾರಿ ಮಾಡಬೇಕು ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಸರ್ಕಾರವನ್ನು ಒತ್ತಾಯಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಹೆಣ್ಣು ಮಕ್ಕಳು ಮಧ್ಯರಾತ್ರಿಯಲ್ಲಿ ಓಡಾಡುವಂತಾದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಂತೆ ಎಂದಿದ್ದರು. ಆದರೆ ಇವತ್ತು ಈ ಪ್ರಕರಣದ ಬಗ್ಗೆ ರಾಜಕಾರಣಿಗಳು ಆ ಯುವತಿ ಆ ಜಾಗಕ್ಕೆ ಏಕೆ ಹೋಗಿದ್ರು ಅಂತ ಕೇಳುತ್ತಿದ್ದಾರೆಯೇ ವಿನಃ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಗಳ ಕುರಿತಂತೆ ಮಾತನಾಡುವುದಿಲ್ಲ. ನಾನು ಈ ಪ್ರಕರಣವನ್ನು ಮಾನೀನಿ ಪ್ರಕರಣ ಅಂತ ಕರೆಯುತ್ತೇನೆ. ಈ ಪ್ರಕರಣ ಹೆಣ್ಣುಮಗಳ ಮಾನವನ್ನ ಎತ್ತಿ ಹಿಡಿಯುವ ಪ್ರಕರಣ ಇದಾಗಬೇಕು ಎಂದು ಆಗ್ರಹಿಸಿದರು..
ಸಂತ್ರಸ್ಥೆಗೆ ತಕ್ಷಣವೇ ಪರಿಹಾರವನ್ನು ನೀಡಿ:
ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ಥೆಗೆ ತಕ್ಷಣವೇ ಪರಿಹಾರವನ್ನು ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಮಾದರಿಯೊಂದನ್ನು ಹುಟ್ಟುಹಾಕಬೇಕು ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಶಿಕ್ಷೆಯಾದ ಬಳಿಕ ಸಂತ್ರಸ್ಥರಿಗೆ ಪರಿಹಾರ ನೀಡುವುದು ಇಲ್ಲಿವರೆಗೂ ನಡೆದು ಬಂದಿರುವ ಕ್ರಮವಾಗಿದೆ. ಆದ್ದರಿಂದ ಮುಖ್ಯಮಂತ್ರಿಯವರು ಹೊಸ ಮಾದರಿಗೆ ನಾಂದಿಯಾಡಬೇಕು ಅಲ್ಲದೇ ಅತಿ ಹೆಚ್ಚು ಪರಿಹಾರವನ್ನು ಸಂತ್ರಸ್ಥೆಯ ಕುಟುಂಬಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
