ದಕ್ಷಿಣ ಕನ್ನಡರಾಜಕೀಯ

ಸದ್ದಿಲ್ಲದೇ ಮತ್ತೆ ಸಚಿವರಾದ ಕರಾವಳಿಯ ಅಂಗಾರ, ಕೋಟ; ಸರಳತೆಯಷ್ಟೇ ಸಾಲದು, ದಕ್ಷತೆಯೂ ಬೇಕು

ಕಿರುಗುಂದ ರಫೀಕ್

ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿಮಂಡಳ ಸೇರಲು ಹಲವು ಶಾಸಕರು ಪಕ್ಷದ ವರಿಷ್ಠರ ಮನೆಮನೆಗೆ ಸುತ್ತಾಡಿ, ಜಾತಿ ಪ್ರಾಬಲ್ಯ ತೋರಿ, ಮಠಾಧೀಶರು, ಸ್ವಾಮೀಜಿಗಳನ್ನು ಭೇಟಿ ಮಾಡಿ, ಎಷ್ಟೋ ಮಂದಿ ದಿಲ್ಲಿವರೆಗೂ ಹೋಗಿ ತೀವ್ರ ಕಸರತ್ತು ನಡೆಸಿ, ರಾಜ್ಯದೆಲ್ಲಡೆ ಸುದ್ದಿಯಾಗುತ್ತಲೇ ಇದ್ದರು. ಆದರೆ ಇವೆಲ್ಲದರ ನಡುವೆ ಸದ್ದುಗದ್ದಲವೇ ಇಲ್ಲದೆ ಕರಾವಳಿ ಭಾಗದ ಇಬ್ಬರು ಸದ್ದಿಲ್ಲದೆ ಮತ್ತೆ ಸಚಿವ ಸ್ಥಾನಕ್ಕೇರಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಎಸ್.ಅಂಗಾರ ಇವರಿಬ್ಬರೂ ಮಂತ್ರಿಗಿರಿ ವಿಷಯದ್ಲಲಿ ತುಂಬಾ ಸರಳತೆಯಿಂದ ವರ್ತಿಸಿದ್ದಾರೆ. ಯಾವುದೇ ಅಹಂ ಭಾವವಾಗಲೀ, ಹರತಾಳವಾಗಲೀ ಇಲ್ಲದೆ ಬೊಮ್ಮಾಯಿ ಮಂತ್ರಿಮಂಡಳಕ್ಕೆ ಪ್ರವೇಶಿಸಿದ್ದಾರೆ.

ಕುಂದಾಪುರದ ಕೋಟಾದಲ್ಲಿರುವ ಅವರ ಮನೆ ಹತ್ತಿರ ಅಂತಹದ್ದೇನೂ ಸಂಭ್ರಮಾಚರಣೆ ಕಂಡುಬಂದಿಲ್ಲ. ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಈಗ 59 ವರ್ಷ ವಯಸ್ಸು. ಮೂಲದಲ್ಲಿ ಫೋಟೋಗ್ರಾಫರ್ ವೃತ್ತಿ ಮಾಡಿಕೊಂಡಿದ್ದರು. ಬಳಿಕ ʼಸಂಘʼದ ಸಂಪರ್ಕ ಬೆಳೆಯಿತು. ಆ ಮೂಲಕ ಬಿಜೆಪಿಗೆ ಪ್ರವೇಶಿಸಿದ್ದರು.

1993ರಿಂದ ಈಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆದ್ದು, 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2012ರಲ್ಲಿ ಮುಜರಾಯಿ ಸಚಿವರಾಗಿದ್ದರು. 2016ರಲ್ಲಿ ಎಂಎಲ್‌ಸಿಯಾಗಿದ್ದರು. 2018ರಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದರು. 2019ರಲ್ಲಿ ಸಚಿವರಾಗಿ ಮುಜರಾಯಿ ಮೀನುಗಾರಿಕೆ, ಒಳನಾಡು ಬಂದರು ಮತ್ತು ಜಲಸಾರಿಗೆ ಸಚಿವ ಸ್ಥಾನ ಸಿಕ್ಕಿತ್ತು.

ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಸತತ ಆರು ಬಾರಿ ವಿಧಾನಸಭೆಗೆ ಆಯ್ಕೆಯಾದವರು. ರೈತಾಪಿ ಕುಟುಂಬದ ಎಸ್. ಅಂಗಾರ ಶಾಸಕರಾಗಿದ್ದರೂ ಸಹ ಅತ್ತ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಅಡುಗೆ ಮಾಡಿಕೊಳ್ಳುವುದು, ಸ್ವತಃ ತಮ್ಮ ಬಟ್ಟೆ ತೊಳೆಯುವ ಮೂಲಕ ಸರಳತೆ ಪ್ರದರ್ಶಿಸಿದವರು. ಯಡಿಯೂರಪ್ಪ ಸಂಪುಟದಲ್ಲೂ ಎಸ್.ಅಂಗಾರ ಸಚಿವರಾಗಿದ್ದು ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿಯಾಗಿ ನೇಮಿಸಲಾಗಿತ್ತು.

ಹೀಗೆ ಮಂತ್ರಿಗಳಾದವರು ಬರೀ ಸರಳತೆ ಪ್ರದರ್ಶಿಸಿಕೊಂಡು ಓಡಾಡಿದರೆ ಸಾಲದು. ಮಂತ್ರಿಸ್ಥಾನದ ಜವಾಬ್ದಾರಿ ಸಿಕ್ಕ ಮೇಲೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು. ಸರ್ಕಾರದಿಂದ ಹೆಚ್ಚು ಅನುದಾನ ತಂದು ಆಯಾ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ವಿನಿಯೋಗಿಸುವಂತೆ ನೋಡಿಕೊಳ್ಳುವಲ್ಲಿ ದಕ್ಷತೆ ಮೆರೆಯಬೇಕು. ಮರುಮಂತ್ರಿಗಳಾಗಿ ಆಯ್ಕೆಯಾಗಿರುವ ಎಸ್.‌ ಅಂಗಾರ ಮತ್ತು ಕೋಟಾ ತಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಸಿಕ್ಕಿದೆ ಎಂಬುದನ್ನು ಅರಿತು ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲಿ ಎಂಬುದೇ ಜನರ ಆಶಯ.

Spread the love

Related Articles

Leave a Reply

Your email address will not be published. Required fields are marked *

Back to top button