‘ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ’

ಬೆಳಗಾವಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಂವಿಧಾನವನ್ನು ಅರಿಯಬಹುದು ಎಂದು ಬೈಲೂರಿನ ನಿಷ್ಕಲ ಮಂಟಪ ಹಾಗೂ ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಶ್ರೀಗಳು ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲೆಯ ಮುಗುಟಖಾನ್ ಹುಬ್ಬಳ್ಳಿಯ ಹೊಳೆಹೊಸೂರು ರಸ್ತೆಯಲ್ಲಿರುವ ಅನುಭವ ಮಂಟಪದಲ್ಲಿ ಇಂದು “ಆಜಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಾಯಣ ನಿರ್ಮಿಸುತ್ತಿರುವ ” ಸರ್ವರಿಗೂ ಸಂವಿಧಾನ ” ನಾಟಕ ತರಬೇತಿ ಹಾಗೂ ಸಿದ್ಧತಾ ಶಿಬಿರದ ಸಾನಿಧ್ಯವಹಿಸಿ ಮಾತನಾಡಿದರು.
ಕಲಾವಿದರು ಯಾವುದೇ ಒಂದು ನಾಟಕವನ್ನು ಆರಂಭಿಸುವ ಮೊದಲು ಅದರ ಇತಿಹಾಸವನ್ನು ಅರಿತಾಗ ಮಾತ್ರ ಪಾತ್ರಗಳಿಗೆ ಜೀವ ತುಂಬಲು ಸಾಧ್ಯ. ನಾಟಕಗಳ ಮೂಲಕ ಜನರಲ್ಲಿ ತಿಳುವಳಿಕೆ, ಜ್ಞಾನವನ್ನು ನೀಡಿ, ಅವರ ಮನಸ್ಸನ್ನು ಪರಿವರ್ತನೆಗೊಳಿಸುವುದು ಮುಖ್ಯವಾಗಿರುತ್ತದೆ ಕಲಾವಿದರಿಗೆ ಆಶೀರ್ವಚನ ನೀಡಿದರು.
ಒಂದು ತಿಂಗಳ ಶಿಬಿರಕ್ಕೆ ಚಾಲನೆ ನೀಡಿದ ಸಾಮಾಜಿಕ ಹೋರಾಟಗಾರರಾದ ಲಕ್ಷ್ಮಣ ಬಕ್ಕಾಯಿ ಮಾತನಾಡಿ,ದೇಶದಲ್ಲಿರುವ ಅನಕ್ಷರಸ್ಥ ಜನರಿಗೆ ಜಾನಪದ ಕಲೆಗಳಾದ ಹಾಡು,ನಾಟಕಗಳ ಮೂಲಕ ಸಂವಿಧಾನದ ಕುರಿತು ಅರಿವು ಮೂಡಿಸಲು ಸಾಧ್ಯ.
ವಿದ್ಯಾವಂತ ಜನರು ಸಂವಿಧಾನವನ್ನು ಓದಿ ತಿಳಿದುಕೊಂಡಿರುತ್ತಾರೆ. ಆದರೆ ಅನಕ್ಷರಸ್ಥ ಹಾಗೂ ಗ್ರಾಮೀಣ ಪ್ರದೇಶದ ಜನರಿಗೂ ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಸಂವಿಧಾನ ಆಶಯ ವಿವರಿಸಲು ಪ್ರಯತ್ನಿಸುತ್ತಿದೆ. ಅಂಬೇಡ್ಕರ್ ಅವರು ದಲಿತ ಸಮಾಜಕ್ಕೆ ಮಾತ್ರವಲ್ಲದೆ ಇಡೀ ದೇಶದ ಸಮಸ್ತ ಜೀವಸಂಕುಲದ ವ್ಯವಸ್ಥಿತವಾದ ಜೀವನಕ್ಕೆ ಒಂದು ಚೌಕಟ್ಟನ್ನು ಒದಗಿಸಿಕೊಟ್ಟ ಸಂವಿಧಾನವನ್ನು ಬರೆದಿದ್ದಾರೆ ಎಂದು ತಿಳಿಸಿದರು.




