12ಕೋಟಿ ಸಾಲ ಪಡೆದು ದುರುಪಯೋಗ; ಕಾರಜೋಳ ಕ್ಷೇತ್ರದ ಸಕ್ಕರೆ ಕಾರ್ಖಾನೆ ವಿರುದ್ಧ ಆರೋಪ

ಬಾಗಲಕೋಟೆ: ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದ ತಿಮ್ಮಾಪುರ ಗ್ರಾಮದ ಬಳಿಯಿರುವ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ 12 ಕೋಟಿ ಸಾಲ ಪಡೆದು ಕಾಮಗಾರಿ ಮಾಡದೇ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಜಿಲ್ಲೆಯ ಏಕೈಕ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಿದೆ. ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ಬಂದ್ ಆಗಿದೆ. ಆದರೆ ಆಡಳಿತ ಮಂಡಳಿ 2018-19ರಲ್ಲಿ ಬಾಗಲಕೋಟೆ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ 12ಕೋಟಿ ಸಾಲ ಪಡೆದುಕೊಂಡಿದೆ. 12 ಕೋಟಿಯಲ್ಲಿ ಕಾರ್ಖಾನೆಯಲ್ಲಿ ಗೋದಾಮು ನಿರ್ಮಾಣ, ಹಾಗೂ ಇಟಿಪಿ ಘಟಕ ಆಧುನೀರಣಕ್ಕಾಗಿ ಸಾಲ ಪಡೆದುಕೊಂಡಿದೆ. ಆದರೆ ಸಾಲ ಪಡೆದು ಗೋದಾಮು,ಇಟಿಪಿ ಘಟಕ ಆಧುನಿಕರಣ ಮಾಡದೇ 12ಕೋಟಿ ಹಣವನ್ನು ಎತ್ತುವಳಿ ಮಾಡಿರುವ ಆರೋಪ ಕೇಳಿಬಂದಿದೆ.
ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ವಿರುದ್ಧ ಆರೋಪ ಕೇಳಿಬಂದಿದ್ದು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಸರ್ಕಾರ ಸಮಗ್ರ ತನಿಖೆ ಮಾಡಬೇಕು, ಜೊತೆಗೆ ಶೀಘ್ರವೇ ಬಂದ್ ಆಗಿರುವ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಬೇಕೆಂದು ರೈತ ಬಸಪ್ಪ ಸಂಗನ್ನವರ ಆಗ್ರಹಿಸಿದ್ದಾರೆ.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇತೃತ್ವದಲ್ಲಿ ತನಿಖಾ ಸಮಿತಿ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದಾಗಲೂ ಸಾಲ ಪಡೆದು ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ. ನಾವು ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದಾಗ ಸಾಲ ಪಡೆದ ಉದ್ದೇಶಿತ ಕಾಮಗಾರಿಗಳು ಆಗಿಲ್ಲ. ಹೀಗಾಗಿ ನಾಳೆ ಈ ಸಂಬಂಧ ನಿರ್ದೇಶಕ ಮಂಡಳಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮದ ಬಗ್ಗೆ ಚರ್ಚಿಸಿ, ನಿರ್ಧರಿಸಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಸರನಾಯಕ ತಿಳಿಸಿದ್ದಾರೆ.
ನಾಳೆ ಮುಧೋಳದಲ್ಲಿ ರೈತರು ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸುವಂತೆ ಹಾಗೂ ಕಾರ್ಮಿಕರಿಗೆ ವೇತನ, ಕಾರ್ಖಾನೆಯಲ್ಲಿ ನಡೆದಿರುವ ಭ್ರಷ್ಟಾಚಾರ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದಾರೆ.
ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ರಾಜಕಾರಣಿಗಳಿಗೆ ಹಣ ಲೂಟಿ ಹೊಡೆಯುವ ಕೇಂದ್ರವಾಗಿದೆಯಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ರೈತರ ಆರ್ಥಿಕ ಪುನಶ್ಚೇತನ ಮಾಡಬೇಕಿರುವ ಕಾರ್ಖಾನೆ ತಾನೇ ಸಂಕಷ್ಟಕ್ಕೆ ಸಿಲುಕಿದೆ. ಇನ್ಮೇಲಾದರೂ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರ್ ಆರಂಭ ಹಾಗೂ ಭ್ರಷ್ಟಾಚಾರದ ವಿರುದ್ಧ ಸರ್ಕಾರ ತನಿಖೆ ನಡೆಸಬೇಕಿದೆ.




