
ಆಟಗಾರ ತನ್ನ ಆಟಕ್ಕೆ ಮೊದಲ ಪ್ರಾಧಾನ್ಯತೆ ನೀಡುತ್ತಾನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದೆಷ್ಟೋ ಸ್ಟಾರ್ ಆಟಗಾರರು ತಂದೆಯ ಶವ ಸಂಸ್ಕಾರ ಮಾಡಿ ಬಳಿಕ ಮೈದಾನಕ್ಕೆ ಇಳಿದು ಭರ್ಜರಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಧಾರವಾಗಿರುತ್ತಾರೆ. ಇನ್ನು ಈ ಸಾಲಿಗೆ ಇನ್ನೊಂದು ಹೆಸರು ಸೇರಿಕೊಳ್ಳಲಿದೆ. ಹೌದು. ಆ ಆಟಗಾರನ ಹೆಸರು ವಿಷ್ಣು ಸಾಳುಂಕಿ.
ವಿಷ್ಣು ಅವರ ನವಜಾತ ಬಾಲಕಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾಳೆ. ಮಗಳ ಸಾವಿನ ಬಳಿಕ ವಿಷ್ಣು ಮಗಳ ಅಂತಿಮ ಸಂಸ್ಕಾರ ನೆರವೇರಿಸಿ ಮೈದಾನಕ್ಕಿಳಿದು ತಂಡದ ಪರ ಶತಕ ಸಿಡಿಸಿದ್ದಾರೆ. ಚಂಡೀಗಢ ವಿರುದ್ಧ ವಿಷ್ಣು 12 ಬೌಂಡರಿಗಳ ನೆರವಿನಿಂದ 104 ರನ್ ಗಳಿಸಿದರು. ಬರೋಡಾ ಕ್ರಿಕೆಟ್ ಸಂಸ್ಥೆ ಅವರನ್ನು ನಿಜವಾದ ಹೀರೋ ಎಂದು ಬಣ್ಣಿಸಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಂದೆ ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಅವರ ಮರಣದ ನಂತರ 1999 ರ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಸಚಿನ್ ತಂದೆ ತೀರಿಕೊಂಡ ನಂತರ ತಾಯಿ ಕುಗ್ಗಿಹೋಗಿದ್ದಳು, ಆದರೆ ದುಃಖದ ಆ ಘಳಿಗೆಯಲ್ಲಿಯೂ ಅವಳು ನಾನು ಮನೆಯಲ್ಲಿ ಇರಲು ಬಯಸಲಿಲ್ಲ ಮತ್ತು ನಾನು ತಂಡಕ್ಕಾಗಿ ಆಡಬೇಕೆಂದು ಬಯಸಿದ್ದಳು. ಕೀನ್ಯಾ ವಿರುದ್ಧ ಆ ಶತಕ ಬಾರಿಸಿದಾಗ ತುಂಬಾ ಭಾವುಕನಾದೆ. ಕೀನ್ಯಾ ವಿರುದ್ಧ ಸಚಿನ್ 101 ಎಸೆತಗಳಲ್ಲಿ 140 ರನ್ ಗಳಿಸಿದ್ದರು.
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಯೂ ರಣಜಿ ಪಂದ್ಯದ ವೇಳೆ ಇದೇ ರೀತಿಯ ಘಟನೆ ನಡೆದಿದೆ. ಅವರು ದೆಹಲಿ ಪರ ಆಡುತ್ತಿದ್ದರು, ಇದ್ದಕ್ಕಿದ್ದಂತೆ ಅವರ ತಂದೆ ನಿಧನರಾದರು. ಇದರ ಹೊರತಾಗಿಯೂ ಬ್ಯಾಟಿಂಗ್‌ಗೆ ಆಗಮಿಸಿದ ವಿರಾಟ್ ಉತ್ತಮ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು.



