Breaking Newsಅಂಕಣಗಳುರಾಜಕೀಯ

ಕೆಂಡದ ರಾಶಿಗೆ ಬೂದಿ ಮುಚ್ಚಿಸಿದ ಬೊಮ್ಮಾಯಿ ನಾಯಕತ್ವ!

ಕಿರುಗುಂದ ರಫೀಕ್

ಚಿಕ್ಕಮಗಳೂರು: ಕೆಲವು ದಿನಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಭಾರೀ ಚರ್ಚೆ ವೇಳೆ ಒಂದು ಡಜನ್ನಿಗೂ ಹೆಚ್ಚು ಹೆಸರುಗಳು ಮುನ್ನೆಲೆಗೆ ಬಂದಿದ್ದವು, ಅವುಗಳ ಮಧ್ಯೆ ಅಪರೂಪವಾಗಿ ಕೇಳಿಬರುತ್ತಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ಎನಿಸಿದೆ.

ಬೊಮ್ಮಾಯಿಗೆ ಗದ್ದುಗೆ ಕೊಡುವ ಮೂಲಕ ಯಡಿಯೂರಪ್ಪ ಅವರನ್ನು ತುಸು ಸಮಾಧಾನಿಸುವ ಪ್ರಯತ್ನ ನಡೆಸಿರುವುದರೊಂದಿಗೆ ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಿಜೆಪಿಯೊಳಗೇ ಎದ್ದಿದ್ದ ಅತೃಪ್ತಿಯ ಹೊಗೆಯನ್ನು ನಿಯಂತ್ರಿಸುವ ಪ್ರಯತ್ನವೂ ನಡೆದಿದೆ. ಸದ್ಯದ ಮಟ್ಟಿಗೆ ಹೊಗೆ ಕಾಣಿಸುತ್ತಿಲ್ಲವಾದರೂ ಆದರೆ ನಿಗಿ ನಿಗಿ ಕೆಂಡಗಳ ರಾಶಿಗೆ ಬೂದಿ ಮುಚ್ಚಿರುವುದಂತೂ ಸುಳ್ಳಲ್ಲ.

ಯಡಿಯೂರಪ್ಪ ಪದಚ್ಯುತಿಗೊಳ್ಳುವಾಗ ಬೆಂಬಲಿಗರ, ಮಠಾಧೀಶರ ಹರತಾಳ ತೀವ್ರವಾಗುವುದನ್ನು ಕಂಡು ಬೆರಗಾದ ಬಿಜೆಪಿ ವರಿಷ್ಠರು ಮುಂದೇನು ಮಾಡಬೇಕೆಂದೇ ತೋಚದಂತಾಗಿದ್ದರು. ಯಡಿಯೂರಪ್ಪ ವಿರೋಧಿಗಳೆಲ್ಲರೂ ಗಪ್‌ಚುಪ್‌ ಆಗುವಂತಾಯಿತು. ಕುರ್ಚಿ ಯಾರಿಗೆ ಎನ್ನುವ ಚರ್ಚೆ ವೇಳೆ ಅತೀಹೆಚ್ಚು ಬಿಂಬಿತವಾಗಿದ್ದ ಪ್ರಹ್ಲಾದ್‌ ಜೋಷಿಗೆ ಅಥವಾ ಆ ಹಿನ್ನೆಲೆಯುಳ್ಳವರಿಗೆ ಒಂದುವೇಳೆ ಸಿಎಂ ಪಟ್ಟ ನೀಡಿದ್ದರೆ ವಿರೋಧದ ಅಲೆ ಈಗಿಂದಲೇ ಬಲು ಜೋರಾಗಿ ಅಪ್ಪಳಿಸುತ್ತಿತ್ತು. ಇದನ್ನು ಅರಿತು ಅಂತಹ ಹರಸಾಹಸಕ್ಕೆ ಕೈಹಾಕಲು ಬಿಜೆಪಿ ಹಿಂದೇಟು ಹಾಕಿತು.

ಹೇಗಾದರೂ ಆಗಲಿ, ಯಡಿಯೂರಪ್ಪ ನಾಯಕತ್ವವನ್ನು ಹೇಗಾದರೂ ಮಾಡಿ ಕೊನೆಗಾಣಿಸಬೇಕಾಗಿದೆ. ಅದರ ಭಾಗವಾಗಿ ಅವರ ಮನತಣಿಸಿ ಅವರೇ ನಿರ್ಗಮಿಸುವಂತೆ ಮಾಡಿ, ಅವರ ಹಿಡಿತ ಸಡಿಲಿಸುವ ಕಾರ್ಯದಲ್ಲಿ ಬಿಜೆಪಿ ಯಶಸ್ವಿಯಾಗತೊಡಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆಡಳಿತಾವಧಿ ಕೇವಲ ಎರಡು ವರ್ಷ ಇರೋದಲ್ವೇ? ಭಿನ್ನಮತೀಯರ ಮನವೊಲಿಸುವ ಕಾರ್ಯವಷ್ಟೇ ಸಧ್ಯಕ್ಕೆ ನಡೆಯಬೇಕಾಗಿದೆ. ಮುಂದಿನ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಣತಂತ್ರದ ಮೊದಲ ಭಾಗವಾಗಿ ಬಸವರಾಜ ಬೊಮ್ಮಾಯಿಯಂತಹ ಸಾಫ್ಟ್‌ ವ್ಯಕ್ತಿತ್ವದ ನಾಯಕನಿಗೆ ಪಟ್ಟ ನೀಡಿ ಕೈತೊಳೆದುಕೊಂಡಿದೆ.

ಇನ್ನು ಸಚಿವ ಸಂಪುಟವೆಂಬ ಅಗ್ನಿ ಪರೀಕ್ಷೆಯೊಂದು ಬಾಕಿ ಉಳಿದಿದೆ. ಹಲವು ಘಟಾನುಘಟಿಗಳು, ಯಡಿಯೂರಪ್ಪ ಪರವುಳ್ಳ ಶಾಸಕರು ಹಾಗೂ ವಿರೋಧಿ ಶಾಸಕರು ಎಲ್ಲರೂ ಸಚಿವ ಸ್ಥಾನಕ್ಕಾಗಿ ಮುಗಿಬೀಳುತ್ತಿರುವುದು ಕಂಡುಬರುತ್ತಿದೆ. ಈ ಪ್ರಕ್ರಿಯೆಯಲ್ಲೂ ಸ್ವಲ್ಪ ಹೆಚ್ಚುಕಮ್ಮಿ ಆದರೂ ಭಿನ್ನಮತ ಸ್ಫೋಟಗೊಳ್ಳುವುದು ಖಚಿತ.

ಡಿಸಿಎಂ ಸ್ಥಾನ ನೀಡುವುದಕ್ಕೆ ಯಡಿಯೂರಪ್ಪರಿಗೆ ಆಪ್ತರೇ ಆಗಿರುವ ಗೋವಿಂದ ಕಾರಜೋಳ, ಶ್ರೀರಾಮುಲು, ಆರ್ ಅಶೋಕ್ ಹೆಸರುಗಳು ಈಗಾಗಲೇ ಪ್ರಸ್ತಾಪವಾಗಿವೆ. ಆದರೆ ಇವರೇ ಅಂತಿಮವಾಗುತ್ತಾರಾ? ವಿರೋಧಿಗಳಾಗಿ ಗುರುತಿಸಿಕೊಂಡಿರುವ ಯತ್ನಾಳ್, ಬೆಲ್ಲದ್, ನಿರಾಣಿ, ಕತ್ತಿ ಸುಮ್ಮನಿರುತ್ತಾರಾ? ಸಿ.ಟಿ.ರವಿ ನಿಲುವೇನು? ಈಶ್ವರಪ್ಪ ಅವರಂತಹ ಅನೇಕ ಹಿರಿಯ ನಾಯಕರು ಯಥಾಸ್ಥಿತಿಯನ್ನೇ ಕಾಪಾಡಿಕೊಳ್ಳುತ್ತಾರಾ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿ ಈಗ ಕುತೂಹಲ ಮೂಡಿಸಿವೆ.

ಒಟ್ಟಿನಲ್ಲಿ ಕೆಂಡಗಳು ಮತ್ತೆ ಉರಿಯುತ್ತವೆಯೋ ಅಥವಾ ಬೂದಿಯೊಳಗೇ ಮರೆಯಾಗಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ!

Spread the love

Related Articles

Leave a Reply

Your email address will not be published. Required fields are marked *

Back to top button