ಮೈಸೂರು ವಿವಿಯಿಂದ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ನಾಲ್ಕು ತಿಂಗಳು ಕಳೆದಿದ್ರು ಇಂದಿಗೂ ಆ ನೋವಿನಿಂದ ಹೊರ ಬರೋಕೆ ಕೋಟ್ಯಾಂತರ ಮಂದಿಗೆ ಸಾಧ್ಯವಾಗುತ್ತಿಲ್ಲ. ಪುನೀತ್ ನಮ್ಮೊಂದಿಗೆ ಇದ್ದಾರೆ ಎಂದು ಕೊಂಡೆ ಅದೆಷ್ಟೋ ಮಂದಿ ದಿನ ದೂಡುತ್ತಿದ್ದಾರೆ. ಪುನೀತ್ ನೆನಪನ್ನು ಹಸಿರಾಗಿರಿಸಲು ನಿತ್ಯ ಒಂದಿಲ್ಲೊಂದು ಕೆಲಸಗಳಲ್ಲಿ ಜನ ತೊಡಗಿಕೊಳ್ತಿದ್ದಾರೆ. ಅಪ್ಪು ಹೇಳದೆ ಮಾಡಿ ಹೋದ ಅದೆಷ್ಟೋ ಕೆಲಸಗಳು ಇಂದೂ ಸಾಕಷ್ಟು ಮಂದಿಗೆ ಸ್ಫೂರ್ತಿಯಾಗಿದೆ. ಇದೀಗ ಪುನೀತ್ ಅವರಿಗೆ ಮತ್ತೊಂದು ಗೌರವ ಸಿಕ್ಕಿದ್ದು ಅಣ್ಣವ್ರು ಹಾದಿಯಲ್ಲೇ ಅಪ್ಪು ಸಾಗಿದ್ದಾರೆ.
ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಿಸಿದೆ. ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ. 46 ವರ್ಷಗಳ ಹಿಂದೆ ವರನಟ ಡಾ.ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಇದೀಗ ಪುನೀತ್ ಗೂ ಗೌರವ ಡಾಕ್ಟರೇಟ್ ಘೋಷಿಸಿದ್ದು ಮಾರ್ಚ್ 15ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತಿದೆ.
ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳ ನಿಯೋಗವನ್ನ ಭೇಟಿ ಮಾಡಿದ್ದ, ವಿವಿಯಿಂದ ಡಾಕ್ಟರೇಟ್ ಸ್ವೀಕರಿಸಲು ಒಪ್ಪಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಿಂದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿಯನ್ನ ನೀಡಲಾಗುತ್ತದೆ.
