ಜೋಡೆತ್ತುಗಳ ಕದ್ದ ಕಳ್ಳರು: ಮಾಲೀಕನನ್ನ ನೋಡ್ತಿದ್ದಂತೆ ಓಡಿ ಬಂದ ಎತ್ತುಗಳು

ದಾವಣಗೆರೆ: ಮಹಾಶಿವರಾತ್ರಿ ದಿನದಂದು ಕಣದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಜೋಡೆತ್ತುಗಳು ಕಳುವಾಗಿದ್ದವು. ಈ ಸಂಬಂಧ ರೈತ ಸಂತೆಬೆನ್ನೂರು ಪೊಲೀಸರಿಗೆ ದೂರು ಕೊಟ್ಟಿದ್ದರು. ಆದ್ರೆ ಪೊಲೀಸರನ್ನೇ ನೆಚ್ಚಿಕೊಳ್ಳದೇ ಸ್ವತಃ ರೈತನೇ ಜೋಡೆತ್ತುಗಳನ್ನು ಪತ್ತೆ ಹಚ್ಚಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ಕಾಕನೂರು ಗ್ರಾಮದ ರೈತ ಸತೀಶ್ ತಿಪ್ಪೇನಹಳ್ಳಿ ಜೋಡೆತ್ತುಗಳನ್ನು ಪತ್ತೆ ಹಚ್ಚಿ, ಮನೆಗೆ ಕರೆ ತಂದಿದ್ದಾರೆ.
ಘಟನೆ ಹಿನ್ನೆಲೆ ಏನು..?
ಶಿವರಾತ್ರಿ ಹಬ್ಬದಂದು ಸಂಜೆ ವೇಳೆಗೆ ಎತ್ತುಗಳನ್ನು ಹೊಲದಲ್ಲಿ ಮೇಯಿಸಿಕೊಂಡು ಬಂದು ಕಣದಲ್ಲಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ರಾತ್ರಿ ವೇಳೆ ಹುಲ್ಲು ಹಾಕಿ ಕಟ್ಟಿ ಹಾಕಿದ್ದರು. ಬೀಗವನ್ನು ಹಾಕಿದ್ದರು. ಆದ್ರೆ ಮಾರನೇ ದಿನ ಬೆಳಿಗ್ಗೆ 5 ಗಂಟೆಗೆ ಬಂದು ನೋಡಿದಾಗ ಕೊಟ್ಟಿಗೆ ಬೀಗ ಒಡೆದು ಜೋಡೆತ್ತುಗಳನ್ನು ಕದ್ದೊಯ್ಯಲಾಗಿತ್ತು. ಇದರಿಂದ ಗಾಬರಿಗೊಂಡಿದ್ದ ರೈತ ತಿಪ್ಪೇಶಪ್ಪ ಸಂತೇಬೆನ್ನೂರು ಪೊಲೀಸರಿಗೆ ದೂರು ನೀಡಿದ್ದರು.
ಇನ್ನು ಪೊಲೀಸರು ಹುಡುಕಿಕೊಡುವ ಭರವಸೆ ಇಟ್ಟುಕೊಂಡಿದ್ದ ತಿಪ್ಪೇಶಪ್ಪ ಅವರು ಎರಡು ದಿನ ಕಾದರು. ಪ್ರಯೋಜನ ಮಾತ್ರ ಆಗಲಿಲ್ಲ. ಇದರಿಂದ ತನ್ನ ಸ್ನೇಹಿತರೊಟ್ಟಿಗೆ ಎತ್ತುಗಳ ಹುಡುಕಾಟಕ್ಕೆ ಮುಂದಾದರು. ಎತ್ತುಗಳ ಮಾರಾಟ, ಸಂತೆ ನಡೆಯುವ ಮಾಹಿತಿ ಪಡೆದುಕೊಂಡು ಕೆರೆಬಿಳಚಿ, ಬಸವಪಟ್ಟಣದಲ್ಲಿ ಹುಡುಕಾಟ ನಡೆಸಿದರೂ ಸಿಗಲಿಲ್ಲ.
ಹೊನ್ನಾಳಿಯಲ್ಲಿ ಸಂತೆ ನಡೆಯುವ ಮಾಹಿತಿ ಪಡೆದು ಹೋದಾಗ ಸಂತೆಯಲ್ಲಿ ಕೊನೆಯ ಮೂರು ಜೋಡಿ ಎತ್ತುಗಳನ್ನು ನೋಡಿದ್ದಾರೆ. ಅದರಲ್ಲಿ ಇದ್ದ ಜೋಡಿ ಎತ್ತುಗಳು ರೈತ ತಿಪ್ಪೇಶಪ್ಪ ಅವರನ್ನು ನೋಡಿ ಹತ್ತಿರಕ್ಕೆ ಓಡಿ ಬಂದಿವೆ. ಆಗ ರೈತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದು, ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ನನ್ನ ಜೀವನಕ್ಕೆ ಎತ್ತುಗಳೇ ಆಧಾರ. ಬದುಕು ಸಹ ನಡೆಯುತ್ತಿದ್ದದ್ದೇ ಜೋಡೆತ್ತುಗಳಿಂದ. ಕಳೆದು ಹೋದಾಗ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅಚ್ಚರಿ ರೀತಿಯಲ್ಲಿ ಜೋಡೆತ್ತುಗಳು ಸಿಕ್ಕಿವೆ. ತುಂಬಾ ಖುಷಿಯಾಗಿದೆ. ಕಳ್ಳರಿಗೆ ತಕ್ಕ ಶಿಕ್ಷೆಯಾಗಬೇಕು. ಎತ್ತುಗಳು ಹಾಗೂ ಜಾನುವಾರುಗಳ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕೆಂದು ರೈತ ತಿಪ್ಪೇಸ್ವಾಮಿ ಹೇಳಿದ್ದಾರೆ.
