ಕೆರೆ ಕಳಪೆ ಕಾಮಗಾರಿ ವಿಚಾರಕ್ಕೆ ತರಾಟೆಗೆ ತೆಗೆದುಕೊಂಡ ಸ್ಥಳೀಯರು

ದಾವಣಗೆರೆ: ನಗರದ ಜನರಿಗೆ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿದ್ದ ಕೆರೆಯು ಅವೈಜ್ಞಾನಿಕ ಮತ್ತು ಕಳಪೆಯಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಎಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯರು ಮತ್ತು ವಾಯುವಿಹಾರಿಗಳು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕೆರೆಯಲ್ಲಿನ ಹೂಳೆತ್ತುವ ಕಾಮಗಾರಿಯು ಸಮರ್ಪಕವಾಗಿ ನಡೆಯುತ್ತಿಲ್ಲ. ಹೂಳು ತೆಗೆದು ಕೆರೆಯಿಂದ ಹೊರ ಹಾಕುವ ಬದಲು ಅಲ್ಲಿಯೇ ಮಣ್ಣನ್ನು ಹಾಕಲಾಗುತ್ತಿದೆ. ಪಾರದರ್ಶಕವಾಗಿ ನಡೆಯುತ್ತಿಲ್ಲ. ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸ್ಥಳೀಯರು ಮೇಲಿಂದ ಮೇಲೆ ಆರೋಪ ಮಾಡಿದ್ದರು. ಜನರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಭೇಟಿ ನೀಡಿತ್ತು. ಆಗಲೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳಪೆ ಕೆಲಸ ಆಗುತ್ತಿದೆ. ಹೊಸ ಪರಿಕರ ಬಳಕೆ ಮಾಡದೇ ಹಳೆಯದ್ದನ್ನೇ ಬಳಸಲಾಗುತ್ತಿದೆ. ವಾಕಿಂಗ್ ಮಾಡುವವರು ನಿತ್ಯವೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಳೆಗಾಲ ಸದ್ಯದಲ್ಲಿ ಬರಲಿದೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕಾಮಗಾರಿ ಪಾರದರ್ಶಕವಾಗಿ ಆಗಬೇಕು. ಜನರಿಂದ ಯಾವುದೇ ಆರೋಪ ಬಾರದಂತೆ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಗಡಿಗುಡಾಳ್ ಮಂಜುನಾಥ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
