ಹರಿಯಾಣ: ಫರಿದಾಬಾದ್ ನಗರಸಭೆಯಿಂದ 500 ಮನೆಗಳ ನೆಲಸಮ

ಫರಿದಾಬಾದ್: ಹರಿಯಾಣದ ಫರಿದಾಬಾದ್ ಪುರಸಭೆ ನಿಗಮವು ಬುಧವಾರ ಸುಮಾರು 500 ಮನೆಗಳನ್ನು ನೆಲಸಮ ಮಾಡಿದೆ. ಕಾರ್ಯಚರಣೆ ಗುರುವಾರೂ ನಡೆಯುತ್ತಿದೆ. ಐದು ನೂರು ಮಹಿಳಾ ಪೋಲಿಸರು ಸೇರಿದಂತೆ ಎರಡು ಸಾವಿರ ಪೋಲಿಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ 10 ಸಾವಿರ ಮನೆಗಳನ್ನು ನೆಲಸಮ ಮಾಡಲಾಗುವುದು ಎನ್ನಲಾಗಿದೆ. ಇಲ್ಲಿ ಸುಮಾರು 30 ವರ್ಷಗಳಿಂದ ಜನರು ನೆಲೆಸಿದ್ದರು ಈಗ ಇವರೆಲ್ಲ ಬೀದಿಗೆ ಬಂದಿದ್ದಾರೆ. ಇದರಿಂದಾಗಿ ಮಕ್ಕಳು ವೃದ್ಧರು ಸೇರಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಲಿದ್ದಾರೆ.
ಮನೆಗಳನ್ನು ನೆಲಸಮ ಮಾಡಲು ಕಳೆದ ಗುರುವಾರವೇ ಪುರಸಭೆಯ ಆಯುಕ್ತ ಡಾ. ಗರಿಮಾ ಮಿತ್ತಲ್, ಉಪ ಆಯುಕ್ತ ಯಶ್ಪಾಲ್ ಮತ್ತು ಡಿಸಿಪಿ ಅಂಶು ಸಿಂಗ್ಲಾ ಸೇರಿದಂತೆ ಎಲ್ಲಾ ಆಡಳಿತಾಧಿಕಾರಿಗಳು ಬೆಳಗ್ಗೆ ಸ್ಥಳಕ್ಕೆ ಬಂದಿದ್ದರು ಆಗ ಅಲ್ಲಿನ ವಾಸಿಗಳು ಪ್ರತಿರೋಧ ಒಡ್ಡಿದ್ದರಿಂದ ಉದ್ರಿಕ್ತ ಪರಿಸ್ಥಿತಿ ಉಂಟಾಗಿ ಪೋಲಿಸರು ಪ್ರತಿಭಟಸಿದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು.
ತೆರವು ಕಾರ್ಯಚರಣೆಗೆ ಅಡ್ಡಿಪಡಿಸಿ ಪ್ರತಿಭಟನೆ ಆರಂಭಿಸಿದ ಸುಮಾರು ನೂರು ಮಂದಿಯನ್ನು ಬಂಧಿಸಲಾಗಿತ್ತು. ನಂತರ ಕೆಲವರ ಕೋರಿಕೆ ಮೇರೆಗೆ ಮನೆಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಾಲ್ಕು ದಿನಗಳ ಅವಕಾಶ ನೀಡಿದ್ದರು. ಆದರೆ ಕೆಲವರು ಮನೆಗಳ ಕಿಟಕಿ ಬಾಗಿಲುಗಳು ಮತ್ತು ಇತರೆ ವಸ್ತುಗಳನ್ನು ಬೇರೆಡೆಗೆ ಕೊಂಡೊಯ್ದರು, ಬಹಳಷ್ಟು ಮಂದಿಗೆ ಅದನ್ನು ಕೊಂಡೊಯ್ದು ಇಡಲು ಜಾಗವಿಲ್ಲದೆ ಸ್ಥಳದಲ್ಲೇ ಇದ್ದರು. ಮತ್ತು ಕೆಲವರು ಅವುಗಳನ್ನು ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದರು.
ಕಳೆದ ಹದಿನೈದು ವರ್ಷಗಳ ಹಿಂದೆ ಇಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಗಳು ಅರಣ್ಯ ಭೂಮಿಯನ್ನು ಲಕ್ಷಾಂತರ ರೂಪಾಯಿ ಪಡೆದು ಈ ಬಡಪಾಯಿಗಳಿಗೆ ಸೈಟುಗಳನ್ನು ಮಾರಾಟ ಮಾಡಿದ್ದರು. DHBVN ಈ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿತ್ತು. ಇವರ ಬಳಿ ಮತದಾನದ ಗುರುತಿನ ಚೀಟಿಯೂ ಇತ್ತು. ಎಲ್ಲವನ್ನೂ ಇದೇ ವಿಳಾಸಕ್ಕೆ ನೀಡಲಾಗಿತ್ತು ಎಂದು ಅಲ್ಲಿನ ಸಂತ್ರಸ್ತರು ಈಗ ಗೋಳು ತೋಡಿಕೊಂಡಿದ್ದಾರೆ.
