Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಸಚಿವ ಈಶ್ವರಪ್ಪ ಕೇಸರಿ ಧ್ವಜ ಹೇಳಿಕೆ ವಿರುದ್ಧ ವಿಧಾನಮಂಡಲದಲ್ಲಿ ಕೋಲಾಹಲ

ಬೆಂಗಳೂರು: ದೆಹಲಿಯ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ವಿಚಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಮಾರ್ದನಿಸಿತು ಗದ್ದಲ-ಗೊಂದಲ ಮತ್ತು ಕೋಲಾಹಲಕ್ಕೆಡೆ ಮಾಡಿಕೊಟ್ಟಿತು.

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈಶ್ವರಪ್ಪ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು ಹಾಗೂ ಅವರ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಧ್ವಜಕ್ಕೆ ಗೌರವ ಕೊಡದವರು ಸಂಪುಟದಲ್ಲಿ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಒಂದು ಹಂತದಲ್ಲಿ ಈಶ್ವರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಈಶ್ವರಪ್ಪ ದೇಶದ್ರೋಹಿ, ಲೂಟಿಕೋರ ಎಂದು ಕಿಡಿಕಾರಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿ ಗೃಹ ಸಚಿವ ಅರಗ  ಜ್ಞಾನೇಂದ್ರ, ಶಿವಮೊಗ್ಗದಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ, ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಳ್ಳು ಆರೋಪ ಮಾಡಿದ್ದಾರೆ. ಆದರೆ ಖಾಲಿ ಕಂಬದಲ್ಲಿ ಕೇಸರಿ ಧ್ವಜ ಹಾರಿಸಲಾಗಿತ್ತೇ ವಿನಃ ರಾಷ್ಟ್ರಧ್ವಜವನ್ನು ಇಳಿಸಿರಲಿಲ್ಲ ಎಂದರು. ಬೇಕಿದ್ದರೆ ಅವರ ಮೇಲೆ ಕೇಸ್ ಹಾಕಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಶೇಮ್, ಶೇಮ್, ಈಶ್ವರಪ್ಪಗೆ ದಿಕ್ಕಾರ ದಿಕ್ಕಾರ ಎಂದು ಘೋಷಣೆ ಕೂಗಿದರು. ಈ ನಡುವೆ, ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಬಹುದೇ, ಬೇಡವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವ ಮಾಧುಸ್ವಾಮಿ ಅವರನ್ನು ಕೋರಿದರು. ಇದು ನಿಲುವಳಿ ಸೂಚನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

ಇದರ ನಡುವೆಯೇ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂದು ಸ್ಪೀಕರ್ ವಿವರಣೆ ಪಡೆಯುತ್ತಿರುವ ನಡುವೆಯೇ, ಕಾಂಗ್ರೆಸ್ ಸದಸ್ಯರು ತಮ್ಮ ಆಸನದಿಂದ ಎದ್ದು ದಿಕ್ಕಾರ, ದಿಕ್ಕಾರ ಘೋಷಣೆ ಕೂಗುತ್ತಾ  ಸ್ಪೀಕರ್ ಪೀಠದ ಎದುರು ಧರಣಿ ನಡೆಸಲು ಮುಂದಾದಾಗ ಸಭಾಧ್ಯಕ್ಷ ಕಾಗೇರಿ ಸದನವನ್ನು ಮಧ್ಯಾಹ್ನ 3  ಗಂಟೆಯ ಭೋಜನ ವಿರಾಮಕ್ಕೆ ಮುಂದೂಡಿದರು.

ಕಾಂಗ್ರೆಸ್ಸಿಗರನ್ನು ಕೆಣಕಿದ ಸಿ.ಟಿ.ರವಿ ಬೆಂಕಿ ಮಾತು

ಇದಕ್ಕೂ ಮುನ್ನ  ಬಿಜೆಪಿ ಸದಸ್ಯ ಸಿ.ಟಿ.ರವಿ, ಕಾಂಗ್ರೆಸ್ ಅವಧಿಯಲ್ಲಿ ರಾಷ್ಟ್ರಧ್ವಜ ಹಿಡಿದವರನ್ನು ಕೊಂದರು. ಸದನದಲ್ಲಿ ಈಗ ಈಶ್ವರಪ್ಪ ವಿಷಯ ಪ್ರಸ್ತಾಪಿಸಿ ಬೆಂಕಿ ಹಚ್ಚಲು ಕಾಯ್ತಾ ಇದ್ದೀರಿ ಎಂದಾಗ, ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ ದೇಶಕ್ಕೆ ಬೆಂಕಿ ಹಚ್ಚುವವರು ನೀವು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿ ಸದನದಲ್ಲಿ ಕೆಲಕಾಲ ಕೋಲಾಹಲ ಏರ್ಪಟ್ಟಿತು.   

Spread the love

Related Articles

Leave a Reply

Your email address will not be published. Required fields are marked *

Back to top button