ನಮ್ಮ ಬೇಡಿಕೆ ಈಡೇರುವವರೆಗೂ ನಾವು ಅಧಿವೇಶನ ನಡೆಯಲು ಬಿಡುವುದಿಲ್ಲ: ಡಿ ಕೆ ಶಿವಕುಮಾರ್

ಬೆಂಗಳೂರು : ಅಧಿವೇಶದಲ್ಲಿ ತಪ್ಪು ಮಾಡಿದ್ದರೆ ನಮ್ಮ ಮೇಲೆ ಕೇಸ್ ದಾಖಲು ಮಾಡಲಿ, ರಾಷ್ಟ್ರಧ್ವಜಕ್ಕೆ ಅಗೌರವ ಮಾಡಿದ್ದಕ್ಕೆ ಮೊದಲು ಸಚಿವ ಕೆ ಎಸ್ ಈಶ್ವರಪ್ಪ ವಿರುದ್ದ ಪ್ರಕರಣ ದಾಖಲಿಸಲಿ. ನಾವು ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಸೋಮವಾರ ಸಚಿವ ಈಶ್ವರಪ್ಪರನ್ನು ವಜಾಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸುತ್ತೇವೆ. ನಂತರ ಹಳ್ಳಿ, ಹಳ್ಳಿಗೂ ಹೋಗಿ ಜನರ ಮಧ್ಯೆ ಹೋರಾಟ ಮಾಡುತ್ತೇವೆ. ಈಶ್ವರಪ್ಪ ದೊಡ್ಡ ಸಾಧನೆ ಮಾಡಿರುವಂತೆ ಅವರಿಗೆ ಸ್ವಾಗತ ಕೋರಲು ಐನೂರು ಮಂದಿ ಸೇರಿದ್ದಾರಂತೆ. ಸಂತೋಷ ಅವರು ಏನಾದರೂ ಮಾಡಿಕೊಳ್ಳಲಿ. ಆದರೆ ದೇಶದ್ರೋಹದ ಹೇಳಿಕೆ ಕೊಟ್ಟ ಸಚಿವ ಈಶ್ವರಪ್ಪನ ವಿರುದ್ಧ ಪ್ರಕರಣ ದಾಖಲಿಸದೆ, ಅವರ ಹೇಳಿಕೆ ವಿರುದ್ಧ ಕಪ್ಪು ಬಾವುಟ ಹಾರಿಸಲು ಹೋದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದರು.
ಪಾದಯಾತ್ರೆ ಇಟ್ಟುಕೊಂಡಿದ್ದೇವೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸರಿಗೆ ಪಾದಾಯಾತ್ರೆಯ ಬಗ್ಗೆ ತಿಳಿಸಿದ್ದೇವೆ. ಎರಡು ದಿನ ಧರಣಿ ಮುಗಿಸಿದ್ದೇವೆ. ಮೂರನೇ ದಿನಕ್ಕೆ ಕಾಲಿಟ್ಟಿದ್ದೇವೆ. ನಿತ್ಯ 3-4 ಕಿಮೀ ನಡೆದು ಪಾದಯಾತ್ರೆ ಶುರುಮಾಡುತ್ತಿದ್ದೇವೆ ಎಂದದು ತಿಳಿಸಿದರು.
ನಾವು ಪಾದಯಾತ್ರೆ ಮಾಡಿದಾಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದರು, ಬಿಜೆಪಿಯ ಹಲವು ನಾಯಕರು ಸಾವಿರಾರು ಜನ ಸೇರಿಸಿ ಕಾರ್ಯಕ್ರಮ ಮಾಡಲಿಲ್ಲವೇ? ಅವರ ವಿರುದ್ಧ ಯಾಕೆ ಕೇಸ್ ಹಾಕಿಲ್ಲ? ಮುಖ್ಯಮಂತ್ರಿಗಳು ನಿಷ್ಪಕ್ಷಪಾತರಾಗಿರುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರೂ ಅವರ ಕೈಗೊಂಬೆಯಾಗಿದ್ದಾರೆ. ಅವರು ಮುಖ್ಯಮಂತ್ರಿ ಕೆಲಸ ಮಾಡುತ್ತಿಲ್ಲ. ಅವರ ಮೊದಲ ಆದ್ಯತೆ ಅವರ ಪಕ್ಷದ ಅಜೆಂಡಾ. ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಈಗ ಅದರಂತೆ ಅವರು ನಡೆದುಕೊಳ್ಳುತ್ತಿಲ್ಲ.
