Breaking NewsLatestರಾಜಕೀಯರಾಜ್ಯ

ಕಲಬುರಗಿ ಪಾಲಿಕೆ ಅಧಿಕಾರ ಹಿಡಿಯಲು ಜೆಡಿಎಸ್ ತಂತ್ರ; ಕಾಂಗ್ರೆಸ್ ಜೊತೆ ಮೈತ್ರಿ ಚಿಂತನೆ?

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯುವುದಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಲು ಜೆಡಿಎಸ್ ಆಲೋಚಿಸುತ್ತಿದೆ ಎನ್ನಲಾಗಿದೆ.

ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ಕಡೆಗೆ ಅತಂತ್ರ ಸ್ಥಿತಿ ತಲೆದೋರಿದೆ. 4 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್ ತೀರ್ಮಾನ ನಿರ್ಣಾಯಕವಾಗಲಿದೆ.

55 ಸದಸ್ಯ ಬಲದ ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬೇಕಾದ 28 ಸ್ಥಾನಗಳನ್ನು ಮುಟ್ಟುವಲ್ಲಿ ಕೊಂಚ ಮುಗ್ಗರಿಸಿದ ಕಾಂಗ್ರೆಸ್ 27 ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಬಿಜೆಪಿಗೆ 23 ಸ್ಥಾನಗಳು ಬಂದಿವೆ. ಜೆಡಿಎಸ್ 4, ಪಕ್ಷೇತರ 1 ಸ್ಥಾನ ಪಡೆದಿವೆ.

ಆರಂಭದಲ್ಲಿ ಬಿಜೆಪಿಯೇ ಇಲ್ಲಿಯೂ ಸರ್ಕಾರ ರಚನೆ ಮಾಡಲಿದೆ ಎನ್ನಲಾಗಿತ್ತು. ಜೆಡಿಎಸ್ ಬೆಂಬಲ ಪಡೆದು ನಾವೆ ಅಧಿಕಾರ ಹಿಡಿಯುತ್ತೇವೆ ಎಂದೂ ಬಿಜೆಪಿ ನಾಯಕರು ಹೇಳುತ್ತಿದ್ದರು. ಸ್ವತಃ ಸಿಎಂ ಬೊಮ್ಮಾಯಿ ಅವರು ಎಚ್​ಡಿ ಕುಮಾರಸ್ವಾಮಿ ಅವರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದರು.

ಜೆಡಿಎಸ್ ಕೂಡ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಅದು ಬಿಜೆಪಿಯೊಂದಿಗೇ ಹೋಗಲಿದೆ ಎಂದೇ ಹೇಳಲಾಗುತ್ತಿತ್ತು.

ಈ ಮಧ್ಯೆ, ಖರ್ಗೆಯವರು ಕಲಬುರಗಿ ಪಾಲಿಕೆ ವಿಚಾರದಲ್ಲಿ ಸಹಕರಿಸಲು ಕೆಳಿಕೊಂಡಿರುವುದಾಗಿ ದೇವೇಗೌಡರು ಹೇಳಿದ್ದರು. ಬಿಜೆಪಿಯ ಯಾರೂ ತಮ್ಮೊಂದಿಗೆ ಮಾತನಾಡಿಲ್ಲ, ಕುಮಾರಸ್ವಾಮಿ ಜೊತೆ ಮಾತನಾಡಿರಬಹುದು ಎಂದು ಅವರು ಹೇಳಿದ್ದರು.

ಕಾಂಗ್ರೆಸ್ ಜೊತೆ ಕೈಜೋಡಿಸುವ ಮೂಲಕ ಮೇಯರ್ ಸ್ಥಾನಕ್ಕೆ ಬೇಡಿಕೆ ಮುಂದಿಡುವುದು ಜೆಡಿಎಸ್​ನ ಸದ್ಯದ ಲೆಕ್ಕಾಚಾರ ಎನ್ನಲಾಗುತ್ತಿದೆ. ಈ ಮೂಲಕ ಮೊದಲ ಬಾರಿಗೆ ಕಲಬುರಗಿ ಪಾಲಿಕೆ ಅಧಿಕಾರವನ್ನು ಕೈಗೆ ತೆಗೆದುಕೊಳ್ಳಲು ಜೆಡಿಎಸ್ ಯತ್ನ ನಡೆದಿದೆ ಎಂಬ ಮಾತುಗಳಿವೆ. ಗೆದ್ದ ಮಾರನೇ ದಿನದಿಮದಲೇ ರಹಸ್ಯ ಸ್ಥಳದಲ್ಲಿರುವ ಜೆಡಿಎಸ್​ನ ನಾಲ್ವರೂ ಸದಸ್ಯರು ಕುಮಾರಸ್ವಾಮಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button