ಅಪಪ್ರಚಾರ ಮಾಡಿದ ವ್ಯಕ್ತಿ ವಿರುದ್ಧ ದೂರು ನೀಡುತ್ತೇನೆ: ಶಾಸಕ ಎಂ ಪಿ ಕುಮಾರಸ್ವಾಮಿ

ಚಿಕ್ಕಮಗಳೂರು: ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಅಪಪ್ರಚಾರ ಮಾಡಿದ್ದು, ಆತನ ವಿರುದ್ಧ ದೂರು ನೀಡುವುದಾಗಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕೋಟಿಗೂ ಅಧಿಕ ಅನುದಾನ ಬಂದಿದ್ದು, ಅದನ್ನು ಅಧಿಕಾರಿಗಳ ಜತೆ ಸೇರಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಬಿಟ್ಟಿದ್ದ ವ್ಯಕ್ತಿಯ ಆರೋಪದಲ್ಲಿ ಹುರುಳಿಲ್ಲ. ಅನುದಾನದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದು, ವ್ಯಕ್ತಿಯ ವಿರುದ್ಧ ಬಾಳೂರು ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಶಾಸಕರಿಂದ ಬೆದರಿಕೆ; ಗ್ರಾಪಂ ಸದಸ್ಯ ಸಚಿನ್ ಮರ್ಕಲ್ ಆರೋಪ
ಅಭಿವೃದ್ಧಿಗೆ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತಾನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಿಡುವಾಳೆ ಗ್ರಾಪಂ ಸದಸ್ಯ ಸಚಿನ್ ಮರ್ಕಲ್ ಆರೋಪಿಸಿದ್ದಾರೆ.

ಮೂಡಿಗೆರೆ ಪ್ರವಾಸಿ ಮಂದಿರಕ್ಕೆ ನನ್ನನ್ನು ಕರೆಸಿ, ಬೆದರಿಕೆ ಹಾಕಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಮಾಹಿತಿಯನ್ನು ಅಳಿಸಿ ಹಾಕಿಸಿದ್ದಾರೆ. ಶಾಸಕರು ನನ್ನ ವಿರುದ್ಧ ಸೇಡಿನ ಕ್ರಮ ಕೈಗೊಂಡಿದ್ದಾರೆ. ಬಾಳೂರು ಠಾಣೆಯನ್ನು ದುರ್ಬಳಕೆ ಮಾಡಿಕೊಂಡು ತನ್ನ ವಿರುದ್ಧ ಅನಗತ್ಯ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಒತ್ತಡ ಹೇರಿದ್ದಾರೆ. ಮುಂದಿನ ದಿನಗಳಲ್ಲೇನಾದರೂ ತನಗೆ ಅಪಾಯ ಉಂಟಾದರೆ ಇದಕ್ಕೆ ಶಾಸಕರೇ ಹೊಣೆಯಾಗಬೇಕು. ಶಾಸಕರ ವಿರುದ್ಧ ತಾನು ದೂರು ನೀಡುತ್ತಿದ್ದು, ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
