ಈಶ್ವರಪ್ಪ ವಿರುದ್ಧ ತಾರ್ಕಿಕ ಅಂತ್ಯದವರೆಗೂ ಹೋರಾಟ: ಸಿದ್ದರಾಮಯ್ಯ

ಬೆಂಗಳೂರು: ಭವಿಷ್ಯದಲ್ಲಿ ರಾಷ್ಟ್ರಧ್ವಜ, ಕೇಸರಿ ಧ್ವಜವಾಗಿ ಬದಲಾಗಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜಿನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ವಿಧಾನಮಂಡಲ ಉಭಯ ಸದನಗಳಲ್ಲಿ ನಾವು ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ತೀರ್ಮಾನಿಸಿದ್ದೇವೆ ಎಂದರು.
ಪ್ರತಿಭಟನಾನಿರತ ಶಾಸಕರಿಗೆ ರಾತ್ರಿ ಊಟ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವಂತೆ ವಿಧಾನಸಭೆ ಕಾರ್ಯದರ್ಶಿ ಅವರಿಗೆ ಪತ್ರ ಮುಖೇನ ಕೋರಲಾಗಿದೆ ಎಂದು ಅವರು ತಿಳಿಸಿದರು.
ಸಚಿವ ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವ ಮೂಲಕ ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ. ಈ ಮೂಲಕ ದೇಶದ್ರೋಹ ಮಾಡಿದ್ದಾರೆ ಎಂದರು. ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧ ಬುಧವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್ ಆರಂಭಿಸಿರುವ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಸದನದಲ್ಲಿ ಅಹೋರಾತ್ರಿ ಧರಣಿ ಇತಿಹಾಸ
2019ರ ಜುಲೈನಲ್ಲಿ ಶಾಸಕರು ಕೊನೆಯ ಬಾರಿಗೆ ವಿಧಾನಸಭೆಯಲ್ಲಿ ಮಲಗಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ವಿಳಂಬ ವಿರೋಧಿಸಿ ಸದನದಲ್ಲೇ ರಾತ್ರಿ ಕಳೆದಿದ್ದರು. ಇದಕ್ಕೂ ಹಿಂದೆ 2010 ರಲ್ಲಿ ಅಕ್ರಮ ಗಣಿಗಾರಿಕೆ ಹಗರಣವನ್ನು ವಿರೋಧಿಸಿ ಆಡಳಿತರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಸದನದಲ್ಲಿ ನಿದ್ದೆಗೆಟ್ಟಿತ್ತು. ಅದಕ್ಕೂ ಹಿಂದೆ 1996ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ವಿರೋಧಿಸಿ ಬಿಜೆಪಿ ಸದಸ್ಯರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.
ಅಧಿವೇಶನ ಮೊಟಕು?
ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಮೊಟಕಗೊಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಪೂರ್ವನಿಗದಿಯಂತೆ ಫೆ.25ವರೆಗೂ ಹತ್ತು ದಿನಗಳ ಬಜೆಟ್ ಅಧಿವೇಶನ ನಡೆಸಲು ಸರ್ಕಾರ ಉದ್ದೇಶಿಸಿತ್ತು.
