ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಕೈಕೊಟ್ಟ ಬಿಎಸ್ ವೈ, ಜಾರಕಿಹೊಳಿ ಬ್ರದರ್ಸ್!

ಹುಬ್ಬಳ್ಳಿ: ನಗರದಲ್ಲಿ ನಡೆದಿರುವ ಮಹತ್ವದ ಎರಡು ದಿನಗಳ ಬಿಜೆಪಿ ಮಹತ್ವದ ಕಾರ್ಯಕಾರಿಣಿ ಸಭೆಗೆ ಮೊದಲ ದಿನವಾದ ಮಂಗಳವಾರ ಮಾಜಿ ಸಿಎಂ ಹಾಗೂ ಪಕ್ಷದ ಹಿರಿಯ ಬಿ.ಎಸ್.ಯಡಿಯೂರಪ್ಪ ಗೈರಾಗಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಕಾರ ಯಡಿಯೂರಪ್ಪ ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ಸಭೆಗೆ ಬಂದಿಲ್ಲ. ರಾಜ್ಯ ಕಾರ್ಯಕಾರಿಣಿಯಲ್ಲಿ ಎಲ್ಲ ಸಚಿವ, ಶಾಸಕರು ಇರಲ್ಲ ಎಂದು ಸಮಜಾಯಿಷಿ ನೀಡಿದರು. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕೂಡ ಸಭೆಗೆ ಗೈರಾಗಿದ್ದಾರೆ. ಮಾಜಿ ಸಚಿವರಾದ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಕೂಡ ಸಭೆಗೆ ಬಂದಿಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.
ಇಂದಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಷಿ, ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಎಲ್ಲರೂ ಉತ್ಸಾಹ ಮತ್ತು ಒಮ್ಮತದಿಂದ ಭಾಗವಹಿಸಿದ್ದಾರೆ.ಸೇವೆ ಮತ್ತು ಸಂಘಟನೆ ಒಟ್ಟಿಗೆ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷ ಸಂಘಟನೆ ಉತ್ತಮವಾಗಿದೆ ಎಂದು ಹೇಳಿಕೊಂಡರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು ಕುರಿತು, ಸಮಗ್ರ ಮಾಹಿತಿ ಪಡೆದು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು. ಸಚಿವ ಸಂಪುಟ ವಿಸ್ತರಣೆ ಸಂಬಂಧ ಪಕ್ಷ ವರಿಷ್ಠರ ಜತೆ ಚರ್ಚಿಸಿ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ. ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಮತಾಂತರ ನಿಷೇಧ ಕಾಯ್ದೆ ಮೇಲ್ಮನೆಯಲ್ಲೂ ಅಂಗೀಕಾರವಾಗುವ ವಿಶ್ವಾಸವಿದೆ ಎಂದೂ ಜೋಷಿ ಹೇಳಿದರು.
ಕೇಂದ್ರದ ಮಾಜಿ ಸಚಿವ,ಶಾಸಕ ಬಸವರಾಜಪಾಟೀಲ್ ಯತ್ನಾಳ್, ಯಡಿಯೂರಪ್ಪ ಅವರು ಖಾಸಗಿ ಕಾರ್ಯಕ್ರಮಕ್ಕೆ ತೆರಳಿರುವ ನಿಮಿತ್ತ ಇಂದಿನ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಬದಲು: ಬಾಯ್ಬಿಟ್ಟರೆ ಶಿಸ್ತು ಕ್ರಮ
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾಣೆ ಇಲ್ಲ. ಪಕ್ಷದ ಯಾವುದೇ ಮುಖಂಡರು ಈ ಬಗ್ಗೆ ಮಾತನಾಡಿದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೀಡಿದ್ದಾರೆ ಎಂದು ಯತ್ನಾಳ್ ತಿಳಿಸಿದರು.
ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟ ಕೆಲವು ಆಕಾಂಕ್ಷಿಗಳಿಗೆ ನಿರಾಶೆಯಾಗಿದೆ ಎಂದು ಹೆಸರು ಹೇಳದೆ ಸಚಿವ ಮುರುಗೇಶ್ ನಿರಾಣಿ ಅವರನ್ನು ಪರೋಕ್ಷವಾಗಿ ಕುಟುಕಿದರು. ಸಭೆಯಲ್ಲಿ ಬೊಮ್ಮಾಯಿ ಸರ್ಕಾರದ ಅಭಿವೃದ್ಧಿ ಬಗ್ಗೆ ಹೊರತುಪಡಿಸಿದರೆ ಮಹತ್ವದ ಯಾವುದೇ ಚರ್ಚೆ ನಡೆದಿಲ್ಲ ಎಂದರು.
