ಬ್ರಿಟನ್ ಸಂಸತ್ ಸಂಕೀರ್ಣದಲ್ಲಿ ದೀಪಾವಳಿ ಆಚರಣೆ

ಲಂಡನ್: ಹರೇ ಕೃಷ್ಣ ದೇವಸ್ಥಾನದಿಂದ ಬಂದಿದ್ದ ಅರ್ಚಕರ ಮಂತ್ರಘೋಷಗಳ ನಡುವೆ ಶಾಂತಿಗಾಗಿ ಪ್ರಾರ್ಥನೆ ಮಾಡಿ ದೀಪ ಬೆಳಗಿಸುವ ಮೂಲಕ ಲಂಡನ್‌ನ ಸಂಸತ್ತಿನ ಸಂಕೀರ್ಣದಲ್ಲಿ ಈ ವರ್ಷದ ದೀಪಾವಳಿ ಆಚರಣೆಯನ್ನು ಮಾಡಲಾಯಿತು.
ಸೋಮವಾರ ಸಂಜೆ ವೆಸ್ಟ್‌ಮಿನಿಸ್ಟರ್ ಅರಮನೆಯೊಳಗಿನ ಭವ್ಯವಾದ ಸ್ಥಳ ಎಂದು ಪರಿಗಣಿಸಲಾದ ಸ್ಪೀಕರ್ ಹೌಸ್‌ನ ಸ್ಟೇಟ್ ರೂಮ್‌ನಲ್ಲಿ ದೀಪಾವಳಿ ಆಚರಣೆ ಮಾಡಲಾಯಿತು.
ಇದು ಸಂಸತ್ತಿನ ಸಂಕೀರ್ಣದಲ್ಲಿ ಆಚರಿಸಲಾದ ಅತಿದೊಡ್ಡ ದೀಪಾವಳಿ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ. ಸಂಸದರು, ರಾಜತಾಂತ್ರಿಕರು, ಕೆಲ ಸಮುದಾಯಗಳ ಮುಖಂಡರು ಮತ್ತು ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಪ್ರತಿನಿಧಿಗಳು ಆಚರಣೆಯಲ್ಲಿ ಪಾಲ್ಗೊಂಡರು.
ಪ್ರಪಂಚದಾದ್ಯಂತ ದೀಪಾವಳಿ ಆಚರಿಸುತ್ತಿರುವ ಎಲ್ಲರಿಗೂ ಶಾಂತಿ ಮತ್ತು ಸಂತೋಷವನ್ನು ನಾನು ಬಯಸುತ್ತೇನೆ ಎಂದು ಹೌಸ್ ಆಫ್ ಕಾಮನ್ಸ್ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಹೇಳಿದರು.
ಲೇಬರ್ ಪಕ್ಷದ ನಾಯಕ ಸರ್ ಕೀರ್ ಸ್ಟಾರ್ಮರ್, ಭಕ್ತಿವೇದಾಂತ ಮ್ಯಾನರ್ ಇಸ್ಕಾನ್ ಟೆಂಪಲ್ ಅಧ್ಯಕ್ಷ ವಿಶಾಖಾ ದಾಸಿ, ಭಾರತೀಯ ಮೂಲದ ಲೇಬರ್ ಪಕ್ಷದ ಹಿರಿಯ ಸಂಸದ ವೀರೇಂದ್ರ ಶರ್ಮಾ ಪ್ರಾರ್ಥನೆಯ ನಂತರ ದೀಪ ಬೆಳಗಿಸಿದರು.
‘ಸ್ಪೀಕರ್ ಹೌಸ್‌ನ ಸ್ಟೇಟ್ ರೂಮ್‌ನಲ್ಲಿ ದೀಪಾವಳಿ ಆಚರಿಸಿದ್ದು, ಬ್ರಿಟನ್ನಿನ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಇದು ಪ್ರತೀ ವರ್ಷ ಹಿಂದೂಗಳು ಆಚರಿಸುವ ಹಬ್ಬವಾಗಿದೆ’ಎಂದು ಭಾರತ ಮೂಲದ ಸಂಸದ ಶೈಲೇಶ್ ವರ ಹೇಳಿದ್ದಾರೆ.
