Breaking NewsLatestರಾಜಕೀಯರಾಜ್ಯ

‘ಚಲ್ತಾ ಹೈ’ ಅಟಿಟ್ಯೂಡ್ ಸಹಿಸುವುದಿಲ್ಲ; ಮೊದಲ ದಿನವೇ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು: ಎಲ್ಲ ಇಲಾಖೆಗಳಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಬೇಕು. ಕನಿಷ್ಠ ಶೇ. 5ರಷ್ಟಾದರೂ ವೆಚ್ಚದಲ್ಲಿ ಕಡಿತವಾಗಬೇಕು ಎಂದು ಅಧಿಕಾರಿಗಳಿಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಸಂಪುಟ ಸಭೆ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಅಂತರ್ ಇಲಾಖಾ ಸಮನ್ವಯ ಅತಿ ಮುಖ್ಯ ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಕಟ್ಟಕಡೆಯ ಸಮಾಜದ ಒಳಿತು ಈ ಸರ್ಕಾರದ ಗುರಿ. ಯಾವುದೇ ಇಲಾಖೆಗಳ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಆಯಾ ಇಲಾಖೆಗಳ ಅಧಿಕಾರಿಗಳದ್ದೇ ಜವಾಬ್ದಾರಿ. ಇದನ್ನು ಯಾರೂ ಮರೆಯುವಂತಿಲ್ಲ. ಹೇಗೆ ಮಾಡಿದರೂ ಆಗುತ್ತದೆ ಎಂಬ ಧೋರಣೆಯಿದ್ದರೆ ಅಂಥ ಧೋರಣೆಯನ್ನು ಅಧಿಕಾರಿಗಳು ಇವತ್ತಿನಿಂದಲೇ ಬಿಡಬೇಕು. ‘ಚಲ್ತಾ ಹೈ’ ಅಟಿಟ್ಯೂಡ್ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿರುವುದಾಗಿ ಬೊಮ್ಮಾಯಿ ತಿಳಿಸಿದರು.

ವಿಶೇಷವಾಗಿ ಬಡವರ ಪರವಾಗಿ, ಹಿಂದುಳಿದ ಮತ್ತು ದಲಿತರ ಪರವಾಗಿ, ಮಹಿಳೆಯರ ಪರವಾಗಿ ನಮ್ಮ ಸರ್ಕಾರ ನಿಲ್ಲಲಿದೆ ಎಂಬ ಮಾತನ್ನು ಬೊಮ್ಮಾಯಿ ಮತ್ತೆ ಮತ್ತೆ ಹೇಳಿದರು.

ರೈತರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂಬ ಆಶಯ ವ್ಯಕ್ತಪಡಿಸಿದ ಅವರು, ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲಾಗುವುದು ಎಂದು ಪ್ರಕಟಿಸಿದರು.

ಸಾಮಾಜಿಕವಾಗಿ ಎಲ್ಲರಿಗೂ ಭದ್ರತೆ ನಮ್ಮ ಗುರಿ. ವೃದ್ಧರಿಗೆ, ವಿಧವೆಯರಿಗೆ, ವಿಶೇಷ ಚೇತನರಿಗೆ ನೆರವಾಗುವ ಯೋಜನೆ ಬಗ್ಗೆ ಆದ್ಯತೆ ಕೊಡಲಾಗುವುದು ಎಂದರು.

ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವುದಾಗಿ ಹೇಳಿದ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ ಅವರು, ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪನವರು ತೆಗೆದುಕೊಂಡ ತೀರ್ಮಾನಗಳು, ಅವು ಆರಂಭಿಸಿದ ಯೋಜನೆಗಳು ಇವೆಲ್ಲವನ್ನೂ ಗಮನಿಸಿ ಮುಂದುವರಿಯುವೆ ಎಂದರು.

ಹಿಂದಿನ ಸರ್ಕಾರದಲ್ಲಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಲಗಿ ಅವರೇ ನನ್ನ ಸರ್ಕಾರದಲ್ಲಿಯೂ ಮುಂದುವರಿಯಲಿದ್ದಾರೆ ಎಂಬ ವಿಚಾರವನ್ನೂ ಅವರು ಸ್ಪಷ್ಟಪಡಿಸಿದರು.

ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಕೈಗೊಂಡು ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ ಎಂದೂ ಅವರು ಇದೇ ವೇಳೆ ಪ್ರಕಟಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button