
ಜಿ.ಮುಮ್ತಾಜ್ ಅಲೀಮ್
ಮುಖ್ಯಮಂತ್ರಿ ಸ್ಥಾನಕ್ಕೆ ಸಮತೂಕದ ಬಸವರಾಜ ಬೊಮ್ಮಾಯಿ ಆಯ್ಕೆಯ ಮೂಲಕ ಬಿಜೆಪಿ ಹೈಕಮಾಂಡ್ ಜಾಣ್ಮೆ ಪ್ರದರ್ಶಿಸಿದೆ.
ಮೂಲತಃ ಜನತಾಪರಿವಾರದಿಂದ ಬಂದ ನಾಯಕನಾದರೂ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಕೊನೆಯ ತನಕವೂ ವಿಚಲಿತರಾಗದೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿಷ್ಠರಾಗಿ ನಡೆದುಕೊಂಡರು. ಇನ್ನು ಮುಂದೆ ಅವರು ತಮ್ಮ ಸ್ವಂತಿಕೆಯ ಮೂಲಕ ಆಡಳಿತದಲ್ಲಿ ತಮ್ಮದೇ ವಿಶಿಷ್ಠ ಛಾಪನ್ನು ಮೂಡಿಸುವ ಅಗತ್ಯವಿದೆ. ಬೊಮ್ಮಾಯಿ ಅವರಿಗೆ ಅದು ಸಾಧ್ಯವಾಗುವುದೇ?
ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿದ್ದಷ್ಟು ಕಾಲ ಅವರಿಗೆ ಅವರ ಕುಟುಂಬದಲ್ಲಿ ಮಗ, ಅಳಿಯ, ಮೊಮ್ಮಕ್ಕಳು ಹೀಗೆ ಅವರ ಕುಟುಂಬಸ್ಥರೇ ಕಂಟಕಪ್ರಾಯರಾಗಿ ಪರಿಣಮಿಸಿದ್ದರು. ಇದರಿಂದಾಗಿಯೇ ಅವರು ಜೈಲಿಗೆ ಹೋಗಿಬಂದರು. ಅವಧಿ ಪೂರ್ಣಗೊಳಿಸಲಾಗದೆ ಒಂದಲ್ಲ ಎರಡೆರಡು ಬಾರಿ ಅವರು ತಮ್ಮ ಅಧಿಕಾರ ಕಳೆದುಕೊಂಡರು.
ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಪುತ್ರ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರ ಆರೋಪಗಳಿಗೆ ಈಡಾದರು. ಇದರ ವಿರುದ್ಧ ಹಲವರು ಬಹಿರಂಗವಾಗಿಯೇ ಸಮರ ಸಾರಿದರು. ಪರಿಣಾಮ ನಮ್ಮ ಮುಂದೆ ಇದ್ದೇ ಇದೆ.
ತಮ್ಮ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ ನಿಜ. ಆದರೆ, ಆಡಳಿತದಲ್ಲಿ ಅವರ ಹಸ್ತಕ್ಷೇಪ ಅಥವಾ ಪ್ರಭಾವ ಇರುವುದಿಲ್ಲ ಎಂದು ಹೇಳಲಾಗದು.
ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಲೂ ಅವರಿಗೆ ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ರೇವಣ್ಣ ಅವರ ಗುಮ್ಮ ಕಾಡುತಿತ್ತು. ಸಿಎಂ ಆಗಿ ಅವರು ತಮ್ಮ ಅಧಿಕಾರವನ್ನು ಸರಿಯಾಗಿ ನಡೆಸಲು ಆಗುತ್ತಿರಲಿಲ್ಲ ಎಂಬ ಮಾತು ಜನಜನಿತ.
ಮೊದಲಿನಿಂದಲೂ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಬಗ್ಗೆ ಅಪಾರ ನಿಷ್ಠೆಯಿಂದ ನಡೆದುಕೊಂಡು ಬಂದಿದ್ದಾರೆ. ಪರಿಣಾಮವಾಗಿ ಅನಾಯಾಸವಾಗಿ ಅವರಿಗೆ ಸಿಎಂ ಸ್ಥಾನ ದಕ್ಕಿದೆ. ಜತೆಗೆ ಲಿಂಗಾಯತ ಸ್ವಾಮೀಜಿಗಳ ಒತ್ತಡ ತಂತ್ರ ಕೂಡ ಇಲ್ಲಿ ಸಾಕಷ್ಟು ಕೆಲಸ ಮಾಡಿದೆ. ಇಲ್ಲಿ ಯಡಿಯೂರಪ್ಪ ಅವರೇ ಅಧಿಕಾರದಲ್ಲಿ ಮುಂದುವರಿದಿದ್ದರೆ ಏನಾಗುತಿತ್ತು ಎಂಬ ಪ್ರಶ್ನೆಯೂ ಇದೆ.
ಈಗ ಬೊಮ್ಮಾಯಿ ಅವರು ಆಡಳಿತದಲ್ಲಿ ಯಡಿಯೂರಪ್ಪ ಮತ್ತು ಮಕ್ಕಳ ಬಿಗಿಹಿಡಿತದಿಂದ ಪಾರಾಗಿ ಕಳಂಕರಹಿತ ಆಡಳಿತಕ್ಕೆ ಶ್ರಮಿಸಲು ಸಾಧ್ಯವೆ ಎಂಬುದು ಮುಂಬರುವ ದಿನಗಳಲ್ಲಿ ಅವರು ನಡೆಸುವ ಆಡಳಿತ ವೈಖರಿಯಿಂದ ನಿಶ್ಚಯವಾಗಲಿದೆ.
ತಲೆನೋವಾಗುವುದೇ ಆರ್ಎಸ್ಎಸ್?
ಬಸವರಾಜ ಬೊಮ್ಮಾಯಿ ಮೂಲತಃ ಆರೆಸ್ಸೆಸ್ಸಿನವರಲ್ಲ. ಆದರೆ ಈಗ ಅವರ ಆಡಳಿತದ ನೀತಿ-ನಿರೂಪಣೆಗಳಲ್ಲಿ ಆರ್ಎಸ್ಎಸ್ ಪಾತ್ರ ಮತ್ತು ಪ್ರಭಾವ ಇದ್ದೇ ಇರುತ್ತದೆ. ಆರ್ಎಸ್ಎಸ್ ಚೌಕಟ್ಟನ್ನು ಮೀರದೇ, ಸಂಘದ ಮನೋಧರ್ಮಕ್ಕೆ ಹೊಂದಿಕೊಂಡು ಆಡಳಿತ ನಡೆಸುವ ಗುಣವನ್ನು ಗೃಹಸಚಿವರಾಗಿ ಅವರು ಈಗಾಗಲೇ ಪ್ರದರ್ಶಿಸಿದ್ದಾರೆ. ಇದೇ ಮನೋಧರ್ಮವನ್ನು ಇನ್ನು ಮುಂದೆಯೂ ಅವರಿಂದ ನಿರೀಕ್ಷಿಸಬಹುದೇ ಹೊರತು ವಿಶಾಲ ಮನೋಭಾವನೆಯ ಜನಮುಖಿ ಆಡಳಿತವನ್ನಲ್ಲ. ಆದಾಗ್ಯೂ ರಾಜ್ಯದ ಕಾನೂನು ಸುವ್ಯವಸ್ಥೆ ರಕ್ಷಿಸುವ ವಿಷಯದಲ್ಲಿ ಅವರ ವಿಶಾಲ ದೃಷ್ಟಿಕೋನ ಅನಿವಾರ್ಯ. ಕಳೆದ ವರ್ಷ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಪೊಲೀಸ್ ಫೈರಿಂಗ್ ಪ್ರಕರಣ ಸಂದರ್ಭದಲ್ಲಿ ಗೃಹ ಸಚಿವರಾಗಿ ಅವರು ನಡೆದುಕೊಂಡ ಹಾಗೂ ಅನುಸರಿಸಿದ ರೀತಿ-ನೀತಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇನ್ನು ಮುಂದೆಯಾದರೂ ಪಕ್ಷಪಾತಕ್ಕೆ ಅವಕಾಶ ನೀಡದೇ ಉತ್ತಮ ಆಡಳಿತಕ್ಕೆ ಶ್ರಮಿಸುವ ಸವಾಲು ಅವರ ಮುಂದಿದೆ.
ಕಾಡಲಿದೆ ಕೊರೋನಾ ಗುಮ್ಮ
ಇದನ್ನು ಹೊರತುಪಡಿಸಿದರೆ ಕೊರೋನಾ ಮೂರನೇ ಅಲೆಯ ಗುಮ್ಮ ಸವಾಲಿನ ರೀತಿಯಲ್ಲಿ ಬೊಮ್ಮಾಯಿ ಅವರ ಮುಂದಿದೆ. ಹಿಂದಿನ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕೋವಿಡ್ ಎರಡನೇ ಅಲೆ ಪರಿಣಾಮವಾಗಿ ರಾಜ್ಯದಲ್ಲಿ ಅತಿ ದೊಡ್ಡ ಪ್ರಮಾಣದಲ್ಲೇ ಸಾವು-ನೋವುಗಳು ನಡೆದವು.
ಪೂರ್ವಭಾವಿ ಸಿದ್ಧತೆಗಳಿಲ್ಲದ ಪರಿಣಾಮ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್‍ಗಳಿಲ್ಲದೇ ಜನತೆ ಪರಿತಪಿಸಿ ಪ್ರಾಣಬಿಡಬೇಕಾಯಿತು. ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಕಾರಣ ಯಡಿಯೂರಪ್ಪ ಸರ್ಕಾರಕ್ಕೆ ಇದು ಅತ್ಯಂತ ಕೆಟ್ಟ ಹೆಸರು ತಂದುಕೊಟ್ಟಿತು. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ. ಕೊರೋನಾ ಕಾಯಿಲೆ ಸೃಷ್ಟಿಸಬಹುದಾದ ಸವಾಲು ಇದ್ದೇ ಇದೆ.
ನೀರಾವರಿ ವಿಚಾರಗಳಿಗೆ ಇದೆಯೇ ಪರಿಹಾರ?
ದಶಕಗಳಿಂದಲೂ ರಾಜ್ಯಕ್ಕೆ ಕೃಷ್ಣ, ಕಾವೇರಿ, ಕಳಸಾ ಬಂಡೂರಿ, ಮೇಕೆದಾಟು ಮತ್ತಿತರ ಜಲವಿವಾದಗಳು ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನೆರೆಯ ರಾಜ್ಯಗಳಿಂದ ತಗಾದೆಗಳು ವ್ಯಕ್ತವಾಗುತ್ತಲೇ ಇವೆ.
ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಆಡಳಿತ ಅನುಭವ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ನೀರಾವರಿ ವಿಷಯಗಳಲ್ಲಿ ಸಾಕಷ್ಟು ಜ್ಞಾನ, ತಿಳುವಳಿಕೆ ಹೊಂದಿದವರು ಎಂದು ಹೆಸರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ನೀರಾವರಿ ವಿಷಯಗಳಲ್ಲಿ ರಾಜ್ಯದ ಹಿತ ರಕ್ಷಿಸುವಲ್ಲಿ ಯಾವ ರೀತಿ ಕಾರ್ಯನಿರ್ವಹಿಸಲಿದ್ದಾರೆ ಮತ್ತು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ ಎಂಬುದೂ ಕುತೂಹಲಕಾರಿಯಾಗಿದೆ.
ಕುಸಿದಿದೆ ಸರ್ಕಾರದ ಜನಪ್ರಿಯತೆ
ಇದರ ಜತೆಗೆ ಕೇಸರಿ ಪಕ್ಷದ ಮುಖ್ಯಮಂತ್ರಿಯಾಗಿ ಹಾಗೂ ರಾಜ್ಯದಲ್ಲಿ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಬೇರುಗಳನ್ನು ಗಟ್ಟಿಗೊಳಿಸುವ ಮತ್ತು ಸಂಘಟನಾ ಚತುರತೆ ಪ್ರದರ್ಶಿಸುವ ಸವಾಲನ್ನು ಅವರು ಹೇಗೆ ಎದುರಿಸುವರು ಎಂಬುದನ್ನು ಬರುವ ದಿನಗಳು ನಿರ್ಣಯಿಸಲಿವೆ.
ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ಸೇರಿದಂತೆ ಜಿಲ್ಲಾಪಂಚಾಯತ್ ಚುನಾವಣೆಗಳು ಅವರ ಮುಂದೆ ಸವಾಲಾಗಿ ನಿಂತಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿಯೂ ಅವರ ಹೆಗಲ ಮೇಲಿರುತ್ತದೆ. ಈ ವಿಷಯದಲ್ಲಿ ಬೊಮ್ಮಾಯಿ ಅವರಿಗೆ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ವಿಶಾಲ ತಳಹದಿ ಹಾಗೂ ಸಂಘದ ಸಾಥ್ ನೆರವಾಗಬಹುದು. ಆದರೆ ರಾಜ್ಯದಲ್ಲಿ ಕುಸಿದಿರುವ ಸರ್ಕಾರದ ಜನಪ್ರಿಯಿತೆಯನ್ನು ಮತ್ತೆ ಎತ್ತಿ ನಿಲ್ಲಿಸುವಲ್ಲಿ ನೂತನ ಮುಖ್ಯಮಂತ್ರಿಯಾಗಿ ಅವರು ಯಾವ ರೀತಿ ಕಾರ್ಯನಿರ್ವಹಿಸುವರು ಎಂಬುದು ಕುತೂಹಲಕಾರಿ ಅಂಶವೇ ಆಗಿದೆ.
ಇದೆಲ್ಲಕ್ಕೂ ಮಿಗಿಲಾಗಿ ಕಳಂಕ ರಹಿತ ಹಾಗೂ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಅವರು ಪ್ರಾಮುಖ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಆಡಳಿತದಲ್ಲಿ ತಮ್ಮ ಆದ್ಯತೆ ಹಾಗೂ ಪ್ರಾಮುಖ್ಯತೆ ಏನು ಎಂಬುದನ್ನು ಜನತೆಯ ಮುಂದಿಡಬೇಕಿದೆ. ಸಂಸದೀಯ ಖಾತೆ ಸಚಿವರಾಗಿದ್ದರಿಂದ ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಕಲೆ ಬೊಮ್ಮಾಯಿ ಅವರಿಗೆ ಈಗಾಗಲೇ ಕರಗತವಾಗಿದೆ. ಜತೆಗೆ ಸಾಕಷ್ಟು ಆಡಳಿತ ಅನುಭವವೂ ಇದೆ. ಮೂಲತಃ ಜನತಾ ಪರಿವಾರದವರೇ ಆಗಿರುವುದರಿಂದ ಸದನದ ಒಳಗೆ ಮತ್ತು ಹೊರಗೆ ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಅವರಂತಹ ನಾಯಕರನ್ನು ಎದುರಿಸುವುದು ಅವರಿಗೆ ಅಷ್ಟೇನೂ ಕಷ್ಟವಾಗಲಾರದು ಎಂದು ನಿರೀಕ್ಷಿಸಬಹುದು.
ಕರ್ನಾಟಕಕ್ಕೆ ನೀಡುವರೆ ಹೊಸ ವಿಷನ್?
ಈ ಹಿಂದೆ ನಿಜಲಿಂಗಪ್ಪನವರು ಕರ್ನಾಟಕ ನಿರ್ಮಾಣಕ್ಕೆ ಬುನಾದಿ ಹಾಕಿದರು, ಡಿ.ದೇವರಾಜಅರಸು ಅವರು ಸಾಮಾಜಿಕ ನ್ಯಾಯ ಪರಿಪಾಲನೆ ಮೂಲಕ ಹಿಂದುಳಿದ ವರ್ಗಗಳ ನಾಯಕ ಎಂದು ಹೆಸರು ಮಾಡಿದರು, ಹೆಚ್.ಡಿ.ದೇವೇಗೌಡ ಮಣ್ಣಿನ ಮಗ ಖ್ಯಾತಿಗೆ ಪಾತ್ರರಾದರು, ರಾಮಕೃಷ್ಣಹೆಗಡೆ ಆಡಳಿತ ವಿಕೇಂದ್ರೀಕರಣಕ್ಕೆ ಕಾರಣರಾದರು, ಎಸ್.ಎಂ.ಕೃಷ್ಣ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಒತ್ತು ನೀಡಿದರು, ಸಿದ್ದರಾಮಯ್ಯ ಅಹಿಂದ ನಾಯಕರಾದರೆ ಯಡಿಯೂರಪ್ಪ ಹಿಂದುತ್ವಕ್ಕಿಂತ ಹೆಚ್ಚಾಗಿ ರೈತ ನಾಯಕ ಎನಿಸಿದರು.
ಮಾಜಿ ಸಿಎಂ ದಿವಂಗತ ಎಸ್.ಆರ್.ಬೊಮ್ಮಾಯಿ ಪುತ್ರನಾಗಿ, ಸಾಕಷ್ಟು ಅಧ್ಯಯನ ಯೋಗ್ಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದಿರುವ ಬಸವರಾಜ ಬೊಮ್ಮಾಯಿ ಹಿಂದಿನ ಮುಖ್ಯಮಂತ್ರಿಗಳಂತೆ ರಾಜ್ಯಕ್ಕೆ ಒಂದು ಹೊಸ ವಿಷನ್ ಮತ್ತು ಪರಿಕಲ್ಪನೆ ನೀಡಬೇಕಿದೆ. ಈ ಮೂಲಕ ಜಾತಿ-ಮತಗಳ ನಡುವೆ ಭಿನ್ನ ಭೇದಕ್ಕೆ ಆಸ್ಪದ ನೀಡದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಎಲ್ಲಾ ಇತಿಮಿತಿಗಳ ನಡುವೆ ಅದು ಅವರಿಂದ ಸಾಧ್ಯವಾಗಲಿ ಎಂದು ಆಶಿಸೋಣ.




