Breaking NewsLatestಚಿಕ್ಕಮಗಳೂರು
ಚಿಕ್ಕಮಗಳೂರಿನ ಶೆಟ್ಟಿಕೊಪ್ಪದಲ್ಲಿ ನಾಲೆ ಒಡೆದು ಮನೆ ಜಲಾವೃತ; ಹಗ್ಗದಿಂದ 9 ಮಂದಿ ರಕ್ಷಣೆ

ಚಿಕ್ಕಮಗಳೂರು: ಮಳೆ ಹೆಚ್ಚಾಗಿ ತುಂಬಿ ಹರಿಯುತ್ತಿದ್ದ ನಾಲೆ ಒಡೆದ ಪರಿಣಾಮ ಪ್ರವಾಹವಾಗಿ ನುಗ್ಗಿದ ನೀರಿಗೆ ಜಲಾವೃತಗೊಂಡ ಮನೆಯೊಳಗಿದ್ದ 9 ಮಂದಿಯನ್ನು ಹಗ್ಗ ಕಟ್ಟಿ ರಕ್ಷಣೆ ಮಾಡಿರುವ ಘಟನೆ ಎನ್ ಆರ್ ಪುರದ ಶೆಟ್ಟಿಕೊಪ್ಪದಲ್ಲಿ ನಡೆದಿದೆ.
ನೀರು ತುಂಬಿದ್ದ ನಾಲೆ ಒಮ್ಮೆಲೇ ಒಡೆದು ರಭಸದ ನೀರು ನುಗ್ಗಿದೆ. ಮನೆಯಲ್ಲಿದ್ದವರು ಭಯಭೀತರಾಗಿದ್ದರು. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕದಳ, ಅರಣ್ಯ ಹಾಗೂ ಕಂದಾಯ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿದರು.
ಎಲ್ಲೆಲ್ಲೂ ಪ್ರವಾಹವಾಗಿ ಹರಿಯುತ್ತಿದ್ದ ನೀರಿನಲ್ಲಿ ಮೇಲಕ್ಕೆ ಬರುವುದು ಕಷ್ಟವಾಗಿತ್ತು. ಹೀಗಾಗಿ ಮರವೊಂದಕ್ಕೆ ಕಟ್ಟಿದ ಹಗ್ಗವನ್ನು ಕೆಳಕ್ಕೆ ಕೊಂಡೊಯ್ದು ಮನೆಯಲ್ಲಿದ್ದವರನ್ನು ಹಗ್ಗದ ಸಹಾಯದಿಂದ ಒಬ್ಬರ ಕೈ ಇನ್ನೊಬ್ಬರು ಹಿಡಿದು ಮೇಲಕ್ಕೆ ಕರೆತರಲಾಯಿತು.
ಐವರು ಮಹಿಳೆಯರು, ಮೂವರು ಪುರುಷರು ಹಾಗೂ 4 ತಿಂಗಳ ಮಗುವನ್ನು ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಯಿತು. ಅಧಿಕಾರಿಗಳ ತಂಡದೊಂದಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ.
