ಪ್ರಧಾನಿ ಮೋದಿ ಕ್ಯಾಬಿನೆಟ್ ಪಂಡರಾಪುರ ಕಾರು ಹೋದಂತೆ ಹೋಗಲಿದೆ: ಸತೀಶ್ ಜಾರಕಿಹೊಳಿ ಲೇವಡಿ

ಬೆಳಗಾವಿ : ಮೊದಲೇ ನರೇಂದ್ರ ಮೋದಿ ಸರ್ಕಾರ 50 ಕಿ.ಮಿ. ವೇಗದಲ್ಲಿ ಓಡುತ್ತಿತ್ತು. ಈಗ ಹೊಸಬರನ್ನ ಹಾಕಿದ್ದಾರೆ. ಈಗ 30 ಕಿ.ಮಿ ವೇಗದಲ್ಲಿ ಸರ್ಕಾರ ಓಡಲಿದೆ. ಪಂಡರಾಪುರ ಕಾರು ಹೋದಂತೆ ಹೋಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಸಂಪುಟದಲ್ಲಿ ಚಲಾವಣೆ ಇಲ್ಲದವರು ಇದ್ದಾರೆ. ರಾಜ್ಯದ ನಾಲ್ವರು ಮಂತ್ರಿ ಆದರು ಏನು ಪ್ರಯೋಜನವಿಲ್ಲ. ಇನ್ನೂ ಕರ್ನಾಟಕದ 10 ಜನರನ್ನ ಮಂತ್ರಿ ಮಾಡಿದ್ರು ಪ್ರಯೋಜನವಿಲ್ಲ. ಪ್ರಧಾನಿ ಮೋದಿ ಬಳಿಯೇ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ. ಟೀಮ್ ಲೀಡರ್ ಕಡೆಯೇ ಇಚ್ಛಾಶಕ್ತಿ ಇಲ್ಲದ ಮೇಲೆ ಮಂತ್ರಿಗಳು ಏನ್ ಮಾಡುತ್ತಾರೆ. ಪ್ರಧಾನಮಂತ್ರಿಗೆ ಈವರೆಗೂ ಯಾವ ಭಾಗದ ಮಂತ್ರಿ ಭೇಟಿ ಆಗಲು ಆಗಲ್ಲ. ಇನ್ನು ಸ್ವಯಂ ಮೋದಿಯವರೇ ವಿಫಲ ಆದ ಮೇಲೆ ಸೈನಿಕರು ಏನು ಮಾಡುತ್ತಾರೆ. ಸುಮ್ಮನೆ ಜನರನ್ನ ಡೈವರ್ಟ್ ಮಾಡಲು ಸಂಪುಟ ವಿಸ್ತರಣೆ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿವೆ. ಕೋರ್ಟ ಆದೇಶ ಮಾಡಿದ್ದರಿಂದ ನಮಗೆ ಆಕ್ಸಿಜನ್ ಲಭ್ಯವಾಯ್ತು. ಇನ್ನು ಲಸಿಕೆಗಾಗಿ ಪರದಾಟ ನಿಲ್ಲುತ್ತಿಲ್ಲ. ಹೀಗೆ ಹೋದ್ರೆ ಲಸಿಕೆ ಅಭಿಯಾನ ಪೂರ್ಣವಾಗಲು ಇನ್ನೂ ಎರಡು ವರ್ಷ ಬೇಕಾಗುತ್ತದೆ ಎಂದು ಇದೇ ವೇಳೆ ಸತೀಶ ಜಾರಕಿಹೊಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು
ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ವಿಚಾರ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಸಿಎಂ ಆಗುವವರು ಎಲ್ಲಿ ಹೇಳಿದ್ದಾರೆ ಸಿಎಂ ಆಗ್ತಿನಿ ಅಂತಾ. ಸಿಎಂ ಸ್ಥಾನ ವಿಚಾರವಾಗಿ ಹಿಂದಿನ ಸಾಲಿನಲ್ಲಿ ಕುಳಿತು ಸೀಟಿ ಹೊಡೆದರೇ ನಾವೇನು ಮಾಡೋಣ. ಮುಂದಿನ ಸಾಲಿನಲ್ಲಿ ಇರುವವರು ಯಾರು ಸಿಎಂ ಆಗ್ತಿನಿ ಅಂತಾ ಹೇಳಿದ್ದಾರಾ..? ಅಭಿಮಾನಿಗಳು ಹೇಳಿದ್ರೆ ಅಲ್ಲ ಹೈಕಮಾಂಡ್, ಶಾಸಕರು ಮುಖ್ಯಮಂತ್ರಿಯನ್ನು ನಿರ್ಧಾರ ಮಾಡ್ತಾರೆ ಎಂದರು.
ಇನ್ನು ಮೋದಿಯವರು ವಾಟ್ಸಪ್ ಡಿಜಿಟಲ್ ಮಿಡಿಯಾದಿಂದ ಪ್ರಧಾನಿ ಆಗಿಲ್ಲ, ಅವರ ಭಾಷಣದಿಂದಲೂ ಪ್ರಧಾನಮಂತ್ರಿ ಆಗಿಲ್ಲ. ಮೋದಿ ಪ್ರಧಾನಮಂತ್ರಿ ಆಗಿದ್ದು ಸಂಘದಿಂದ. ಆರ್ಎಸ್ಎಸ್ಗೆ ನೂರು ವರ್ಷದ ಇತಿಹಾಸವಿದೆ. ಹೀಗಾಗಿ ಸಂಘಟನೆಯಿಂದ ಪ್ರಧಾನಮಂತ್ರಿ ಆಗಿದ್ದಾರೆ ಎಂದು ಹೇಳಿದರು.
